ನವದೆಹಲಿ, ಆ 08 (DaijiworldNews/DB): ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡುವ ಮೂಲಕ ಸಂಸತ್ತಿಗೆ ಮತ್ತು ಸಂಸದರಿಗೆ ಮಾಡಿರುವ ಅವಮಾನ ಮಾಡಲಾಗಿದೆ ಎಂದು ಕಾಂಗ್ರೆಸ್ ಕಿಡಿ ಕಾರಿದೆ.
ಈ ಕುರಿತು ಸೋಮವಾರ ಹೇಳಿಕೆ ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಉಭಯ ಸದನಗಳ ಅಧ್ಯಕ್ಷರು ಈ ರೀತಿಯ ಬೆಳವಣಿಗೆಗಳು ಇನ್ನು ಮುಂದೆ ನಡೆಯದಂತೆ ನೋಡಿಕೊಳ್ಳಲು ಇದು ಸೂಕ್ತ ಸಮಯವಾಗಿದೆ ಎಂದರು.
ಸಂಸತ್ತಿನಲ್ಲಿ ಅಧಿವೇಶನ ನಡೆಯುತ್ತಿರುವಾಗಲೇ ಖರ್ಗೆ ಅವರಿಗೆ ಇಡಿ ಸಮನ್ಸ್ ನೀಡಿರುವುದು ಕಾಂಗ್ರೆಸ್ ಮತ್ತು ಕಾಂಗ್ರೆಸ್ ನಾಯಕರಿಗೆ ಕಿರುಕುಳ ನೀಡುವ ಉದ್ದೇಶವನ್ನು ಹೊಂದಿದೆ. ಅಲ್ಲದೆ ಸಂಸತ್ತಿನಲ್ಲಿ ಅಧಿವೇಶನ ನಡೆಯುವಾಗ ಈ ರೀತಿ ಸಮನ್ಸ್ ನೀಡುವುದು ಪವಿತ್ರ ಸಂಸ್ಥೆಯಾದ ಸಂಸತ್ತು ಮತ್ತು ಸಂಸದರಿಗೆ ಮಾಡುವ ಅವಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸತ್ತಿನ ಮತ್ತು ಸಂಸದರ ಘನತೆ, ಸಮಯ, ಗೌರವ ಉಳಿಸಿಕೊಳ್ಳಲು ಇಂತಹ ಬೆಳವಣಿಗೆಗಳ ಬಗ್ಗೆ ಉಭಯ ಸದನಗಳ ಸಭಾಪತಿಗಳು ಚರ್ಚಿಸಬೇಕು. ಸಂಸತ್ತು ಮತ್ತು ಸಂಸದರ ಮೇಲೆ ನಡೆಯುವ ಇಂತಹ ಅವಮಾನಗಳು ಮರುಕಳಿಸದಿರುವಂತೆ ಮಾಡಲು ಇದು ಸಕಾಲವಾಗಿದೆ ಎಂದವರು ಇದೇ ವೇಳೆ ಸಲಹೆ ನೀಡಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖರ್ಗೆ ಅವರು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು ಗುರುವಾರ ಸಮನ್ಸ್ ಜಾರಿ ಮಾಡಿತ್ತು.