ಬೆಂಗಳೂರು, ಆ 08 (DaijiworldNews/DB): ಚಾಮರಾಜಪೇಟೆ ಆಟದ ಮೈದಾನದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಧ್ವಜಾರೋಹಣವನ್ನು ಎಲ್ಲರೂ ಸೇರಿಕೊಂಡು ಮಾಡುತ್ತೇವೆ. ಗಣರಾಜ್ಯೋತ್ಸವವನ್ನೂ ಇಲ್ಲೇ ಮಾಡುತ್ತೇವೆ. ಗಣೇಶೋತ್ಸವ ಮಾಡುವಂತಿಲ್ಲ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ದಿನವಾದ ಆಗಸ್ಟ್ 15ರಂದು ಚಾಮರಾಜಪೇಟೆ ಆಟದ ಮೈದಾನದಲ್ಲಿ ಎಲ್ಲರೂ ಸೇರಿಕೊಂಡು ಭಾರತದ ಧ್ವಜಾರೋಹಣ ಮಾಡುತ್ತೇವೆ. ಸ್ವಾತಂತ್ರ್ಯ, ಗಣರಾಜ್ಯೋತ್ಸವದಂತಹ ರಾಷ್ಟ್ರೀಯ ಹಬ್ಬ ಹಾಗೂ ನ. ೧ ರಂದು ಕನ್ನಡ ರಾಜ್ಯೋತ್ಸವ ಮಾಡಲು ಮಾತ್ರ ಅವಕಾಶವಿದೆ. ಆದರೆ ಇಲ್ಲಿ ಗಣೇಶೋತ್ಸವವನ್ನು ಮಾಡುವಂತಿಲ್ಲ ಎಂದರು.
ಈಗಾಗಲೇ ಚಾಮರಾಜಪೇಟೆ ಆಟದ ಮೈದಾನವು ಕಂದಾಯ ಇಲಾಖೆಯ ಸ್ವತ್ತು ಎಂದು ಬಿಬಿಎಂಪಿ ಘೋಷಿಸಿದ ಬಳಿಕ ಜಮೀರ್ ಅವರ ಈ ಹೇಳಿಕೆ ವಿವಾದ ಸೃಷ್ಟಿಸಿದೆ. ನಮಾಜ್ ಮಾಡಬಹುದಾದರೆ ಗಣೇಶೋತ್ಸವ ಯಾಕೆ ಮಾಡಬಾರದು ಎಂದು ಹಿಂದೂ ಸಂಘಟನೆಗಳು ಪ್ರಶ್ನಿಸಿದ್ದಾರೆ.
ಇನ್ನು ಜಮೀರ್ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿರುವ ವಿಶ್ವ ಸನಾತನ ಪರಿಷತ್ ಅಧ್ಯಕ್ಷ ಭಾಸ್ಕರ್, ಜಮೀರ್ ಅವರ ವಿವಾಹದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಚಾಮರಾಜಪೇಟೆ ಮೈದಾನವನ್ನು ವರದಕ್ಷಿಣೆಯಾಗಿ ನೀಡಿತ್ತಾ ಎಂದು ಪ್ರಶ್ನಿಸಿದ್ದಾರೆ.