ಪಾಟ್ನಾ, ಆ 08 (DaijiworldNews/MS): ಬಿಹಾರ ಸಿಎಂ ಮತ್ತು ಜೆಡಿಯೂ ನಾಯಕ ನಿತೀಶ್ ಕುಮಾರ್, ಎನ್ ಡಿ ಎ ಮೈತ್ರಿ ಕೂಟ ತೊರೆಯುವ ಸುಳಿವು ಸಿಕ್ಕಿದೆ.
ನಿತೀಶ್ ಕುಮಾರ್ ನೇತೃತ್ವದ ಜೆಡಿಯೂ ಮತ್ತು ಬಿಜೆಪಿ ನಡುವೆ ಎಲ್ಲವೂ ಸರಿಯಾಗಿಲ್ಲಎನ್ನುವುದು ಮತ್ತೊಮ್ಮೆ ಜಗಜ್ಜಾಹೀರವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾನುವಾರ ನಡೆಯಲಿರುವ ನೀತಿ ಆಯೋಗದ ಸಭೆಯಿಂದ ದೂರ ಉಳಿದಿರುವ ಬಿಹಾರ ಮುಖ್ಯಮಂತ್ರಿಯ ನಿರ್ಧಾರವು, ಎರಡು ಎನ್ಡಿಎ ಮಿತ್ರಪಕ್ಷಗಳ ವಿಭಜನೆಗೆ ಕಾರಣವಾಗಬಹುದು ಎನ್ನಲಾಗಿದೆ.
ಇನ್ನೊಂದೆಡೆ ಬಿಜೆಪಿಯೊಂದಿಗೆ -ಜೆಡಿಯೂ ಭಿನ್ನಾಭಿಪ್ರಾಯದ ನಡುವೆ ನಿತೀಶ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ಮಾತನಾಡಿದ್ದಾರೆ ಎಂದು ಮೂಲಗಳು ಹೇಳಿವೆ.
ಪಾಟ್ನಾದಲ್ಲಿ ನಾಳೆ ಜೆಡಿಯೂ ತನ್ನ ಎಲ್ಲಾ ಶಾಸಕರು, ಎಂಎಲ್ಸಿ ಮತ್ತು ಸಂಸದರ ಸಭೆ ಕರೆದಿದ್ದು, ಮಹಾಘಟಬಂಧನ್ಗೆ ಮರಳಬಹುದು ಎನ್ನಲಾಗಿದೆ. ಕೇಂದ್ರದ ಮಾಜಿ ಸಚಿವ ಆರ್ಸಿಪಿ ಸಿಂಗ್ ವಿರುದ್ಧದ ಭ್ರಷ್ಟಾಚಾರ ಆರೋಪ ಸಂಬಂಧ ಜೆಡಿಯೂ ಹಾಗೂ ಬಿಜೆಪಿ ನಡುವಿನ ಘರ್ಷಣೆ ಜೋರಾಗಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಬಿಹಾರದಲ್ಲಿ ಜೆಡಿಯು-ಬಿಜೆಪಿ ಮೈತ್ರಿ ಮುರಿದು ಬೀಳುವ ಹಂತದಲ್ಲಿದೆ. ಹೆಚ್ಚಿನ ಜೆಡಿಯು ಶಾಸಕರು ಮಧ್ಯಂತರ ಚುನಾವಣೆಯಿಂದ ದೂರವಿರುವುದರಿಂದ, ರಾಜ್ಯದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಪಕ್ಷವು ಆರ್ಜೆಡಿ, ಕಾಂಗ್ರೆಸ್ ಮತ್ತು ಎಡರಂಗದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.