ಭಿಲ್ವಾರ, ಆ 08 (DaijiworldNews/MS): ರಾಜಸ್ಥಾನದ ಭಿಲ್ವಾರದ ಪೆಟ್ರೋಲ್ ಬಂಕ್ ಮಾಲೀಕ ಅಶೋಕ್ ಮುಂದ್ರಾ ಎನ್ನುವವರು ಏಕ-ಬಳಕೆಯ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ವಿನೂತನ ಯೋಜನೆಯೊಂದನ್ನು ಜನರ ಮುಂದಿಟ್ಟಿದ್ದಾರೆ.
ಭಿಲ್ವಾರದ ಚಿತ್ತೋರ್ ರಸ್ತೆಯಲ್ಲಿರುವ ಛಗನ್ಲಾಲ್ ಬಗ್ತವರ್ಮಾಲ್ ಪೆಟ್ರೋಲ್ ಪಂಪ್ನ ಮಾಲೀಕ ಅಶೋಕ್ ಕುಮಾರ್ ಮುಂದ್ರಾ ಅವರು ಏಕ ಬಳಕೆಯ ಪ್ಲಾಸ್ಟಿಕ್ಗಳ ಬಳಕೆಯನ್ನು ತ್ಯಜಿಸಲು ಜಾಗೃತಿಗಾಗಿ ಪೆಟ್ರೋಲ್ ಡೀಸೆಲ್ ಮೇಲೆ ರಿಯಾಯಿತಿ ನೀಡುತ್ತಿದ್ದಾರೆ.
"ಯಾರಾದರೂ ಒಂದು ಲೀಟರ್ ಹಾಲಿನ ಪೌಚ್ ಅಥವಾ ಅರ್ಧ ಲೀಟರ್ನ ಎರಡು ಪೌಚ್ಗಳು ಅಥವಾ ಒಂದು ಲೀಟರ್ ನೀರಿನ ಬಾಟಲಿಯನ್ನು ತಂದರೆ ನಾನು ಪ್ರತಿ ಲೀಟರ್ ಪೆಟ್ರೋಲ್ಗೆ 1 ರೂಪಾಯಿ ಮತ್ತು ಡೀಸೆಲ್ಗೆ 50 ಪೈಸೆ ರಿಯಾಯಿತಿ ನೀಡುತ್ತೇನೆ. ಈ ಪೌಚ್ಗಳನ್ನು ಪೆಟ್ರೋಲ್ ಪಂಪ್ನಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ವಿಲೇವಾರಿ ಮಾಡಲು ಸರಸ್ ಡೈರಿಗೆ ನೀಡಲಾಗುವುದು" ಎಂದು ಮುಂದ್ರಾ ಮಾಧ್ಯಮಗಳಿಗೆ ಹೇಳಿದ್ದಾರೆ.
"ಏಕ-ಬಳಕೆಯ ಪ್ಲಾಸ್ಟಿಕ್ ಮತ್ತು ಪಾಲಿಥಿನ್ ಬಳಕೆಯ ವಿರುದ್ಧ ಜಾಗೃತಿ ಮೂಡಿಸಲು ನಾನು ಈ ಅಭಿಯಾನವನ್ನು ಪ್ರಾರಂಭಿಸಿದೆ. ಭಿಲ್ವಾರಾವನ್ನು ಪ್ಲಾಸ್ಟಿಕ್ ಮುಕ್ತ ನಗರವಾಗಿ ನೋಡಲು ನಾನು ಬಯಸುತ್ತೇನೆ. ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಹಾನಿ ಮಾಡುವುದಲ್ಲದೆ ಬೀದಿ ಪ್ರಾಣಿಗಳಿಗೆ, ವಿಶೇಷವಾಗಿ ಹಸುಗಳಿಗೆ ಅಪಾಯವನ್ನುಂಟುಮಾಡುತ್ತದೆ. ಹೀಗಾಗಿ ಈ ಆಫರ್ 6 ತಿಂಗಳ ಕಾಲ ಮುಂದುವರಿಯಲಿದೆ" ಎಂದು ತಿಳಿಸಿದ್ದಾರೆ.