ಮದ್ದೂರು, ಆ 08 (DaijiworldNews/DB): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆಲಿಂಗನವು ಧೃತರಾಷ್ಟ್ರನ ಆಲಿಂಗನದಂತೆ ಎಂದು ಕಂದಾಯ ಸಚಿವ ಆರ್. ಅಶೋಕ್ ಲೇವಡಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಸನ್ನೆ ಮಾಡಿದ ನಂತರ ಅವರಿಬ್ಬರು ಆಲಿಂಗನ ಮಾಡಿಕೊಂಡಿದ್ದಾರೆ. ಇದು ಸನ್ನೆಯ ಬಳಿಕದ ಆಲಿಂಗನವಾಗಿದೆ. ಧೃತರಾಷ್ಟ್ರನ ಆಲಿಂಗನದಂತೆಯೇ ಇದೆ ಎಂದರು.
ವಿಧಾನಸಭೆಯಲ್ಲಿಯೂ ಡಿ.ಕೆ. ಶಿವಕುಮಾರ್ ಹಿಂದೆ ಇದೇ ರೀತಿ ಮಾಡಿದ್ದರು. ಸುಮ್ಮನಿದ್ದ ಕುಮಾರಸ್ವಾಮಿಯವರ ಕೈ ಹಿಡಿದೆತ್ತಿ ಜೋಡೆತ್ತು ಎಂದಿದ್ದರು. ಬಳಿಕ ಕಾವೇರಿ ನದಿಯಲ್ಲಿ ಜೋಡೆತ್ತು ಸಂಬಂಧಕ್ಕೆ ಎಳ್ಳು ನೀರು ಬಿಟ್ಟಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಸಿದ್ದರಾಮಯ್ಯನವರನ್ನು ಆಲಿಸಿಕೊಂಡ ಡಿಕೆಶಿ ಅವರನ್ನು ಯಾವ ನದಿಗೆ ಎಳ್ಳು ನೀರು ಬಿಡಲಿದ್ದಾರೆಯೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಕಾಂಗ್ರೆಸ್ನ ಅಸ್ತಿತ್ವ ಇರಲಿಲ್ಲ. ಪಾಕ್, ಚೀನಾ ಮತ್ತು ಇತರ ಶತ್ರು ದೇಶಗಳ ವಿರುದ್ದ ಹೋರಾಡಿ ದೇಶ ರಕ್ಷಣೆ ಕೆಲಸ ಮಾಡಿರುವುದೇ ಬಿಜೆಪಿ. ಬಿಜೆಪಿ ಮತ್ತು ಆರೆಸ್ಸೆಸ್ ಬಗ್ಗೆ ಮಾತನಾಡುವ ನೈತಿಕ ಹಕ್ಕು ಸಿದ್ದರಾಮಯ್ಯ ಅವರಿಗಿಲ್ಲ ಎಂದು ಇದೇ ವೇಳೆ ಆರ್. ಅಶೋಕ್ ತಿಳಿಸಿದರು.