ಬೆಂಗಳೂರು, ಆ 08 (DaijiworldNews/DB): ಚಾಮರಾಜ ಪೇಟೆಯ ಈದ್ಗಾ ಮೈದಾನ ಕಂದಾಯ ಇಲಾಖೆ ಸ್ವತ್ತು ಎಂಬುದಾಗಿ ಬಿಬಿಎಂಪಿ ಘೋಷಿಸಿದ ಬೆನ್ನಲ್ಲೇ ಹಿಂದೂ ಸಂಘಟನೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದು, ಇದು ಮುಸ್ಲಿಂ ಸಮುದಾಯದ ಮುಖಂಡರ ಆಕ್ಷೇಪಕ್ಕೆ ಕಾರಣವಾಗಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಈದ್ಗಾ ಮೈದಾನ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.
ಈದ್ಗಾ ಮೈದಾನವು ಕಂದಾಯ ಇಲಾಖೆಗೆ ಸೇರಿದ್ದು ಎಂದು ಬಿಬಿಎಂಪಿ ಘೋಷಿಸಿತ್ತು. ಇದಾದ ಬಳಿಕ ಭಾನುವಾರ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಅಲ್ಲದೆ, ಆಗಸ್ಟ್ 15ರಂದು ಈ ಮೈದಾನದಲ್ಲಿ ಧ್ವಜ ಹಾರಿಸುತ್ತೇವೆ ಎಂದು ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ ಹೇಳಿತ್ತು. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ಇಲ್ಲಿ ಆಗಮಿಸಿ ಧ್ವಜಾರೋಹಣ ಮಾಡಲಿ ಎಂದೂ ಹೇಳಿತ್ತು. ಈ ಎಲ್ಲಾ ಬೆಳವಣಿಗೆಗಳಿಂದ ಮುಸ್ಲಿಂ ಮುಖಂಡರಿಂದ ಆಕ್ಷೇಪ ವ್ಯಕ್ತವಾಗಿದೆ. ಈ ಕಾರಣಕ್ಕಾಗಿ ಸ್ಥಳದಲ್ಲಿ ಪೊಲೀಸ್ ಕಣ್ಗಾವಲು ಹೆಚ್ಚಿಸಲಾಗಿದೆ ಎಂದು ತಿಳಿದು ಬಂದಿದೆ.
ಚಾಮರಾಜಪೇಟೆ ಮೈದಾನಕ್ಕೆ ಜಯಚಾಮರಾಜೇಂದ್ರ ಒಡೆಯರ್ ಆಟದ ಮೈದಾನ ಎಂದು ಹೆಸರಿಡುವಂತೆ ವೇದಿಕೆ ಇದೇ ವೇಳೆ ಒತ್ತಾಯಿಸಿದೆ.