ನವದೆಹಲಿ, ಆ 07 (DaijiworldNews/DB): ಬಹುತೇಕ ಎಲ್ಲಾ ಸರ್ಕಾರಿ ಸಂಸ್ಥೆಗಳು ಭ್ರಷ್ಟವಾಗಿದ್ದು, ಸಂಸತ್ ನಿಷ್ಕ್ರಿಯತೆಯಿಂದ ಕೂಡಿದೆ. ಪ್ರಜಾಪ್ರಭುತ್ವವು ಏದುಸಿರು ಬಿಡುವ ಪರಿಸ್ಥಿತಿ ದೇಶದಲ್ಲಿ ಉಂಟಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಟೀಕೆ ವ್ಯಕ್ತಪಡಿಸಿದ್ದಾರೆ.
ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ಬೆಲೆ ಏರಿಕೆ ವಿರುದ್ದ ಪ್ರತಿಭಟಿಸಿದರೆ ಅದನ್ನು ರಾಮ ಮಂದಿರ ಶಿಲಾನ್ಯಾಸ ನೆರವೇರಿಸಿದ ದಿನಕ್ಕೆ ಸಂಬಂಧ ಕಲ್ಪಿಸಿ ಟೀಕಿಸುತ್ತಿದ್ದಾರೆ. ಆದರೆ ನಾವು ಪ್ರತಿಭಟನೆ ದಿನಾಂಕ ನಿರ್ಧರಿಸುವಾಗ ಶಿಲಾನ್ಯಾಸದ ದಿನದ ವಿಷಯ ನಮ್ಮ ಕಲ್ಪನೆಯಲ್ಲಿ ಇರಲಿಲ್ಲ, ಬದಲಾಗಿ ಸಂಸದರೆಲ್ಲರು ಒಟ್ಟಾಗುವ ಪೂರಕ ದಿನವನ್ನು ಆಯ್ಕೆ ಮಾಡಲಾಗಿತ್ತು. ಇಂತಹ ಟೀಕೆಗಳು ಖಂಡನೀಯ ಎಂದರು.
ಪಕ್ಷದ ನಾಯಕರು ಇಡಿ ವಿಚಾರಣೆ ಹಾಜರಾಗುವುದನ್ನು ತಪ್ಪಿಸಲು ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿದೆ ಎಂಬ ಬಿಜೆಪಿ ಆರೋಪವನ್ನು ತಳ್ಳಿ ಹಾಕಿದ ಅವರು, ನಾವು ಪ್ರತಿಭಟನೆ ನಡೆಸಿರುವುದು ಬೆಲೆ ಏರಿಕೆ, ನಿರುದ್ಯೋಗ, ಜಿಎಸ್ಟಿ ವಿಧಿಸುವಿಕೆಯ ಕುರಿತಾಗಿಯೇ ಹೊರತು ಬೇರೇನಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯಸಭೆ ಕಲಾಪದಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾಗಿಯಾಗಿದ್ದಾಗಲೇ ಅವರಿಗೆ ಜಾರಿ ನಿರ್ದೇಶನಾಲಯವು ಸಮನ್ಸ್ ನೀಡಿತ್ತು. ಆದರೆ ಖರ್ಗೆಯವರನ್ನು ರಕ್ಷಿಸುವಲ್ಲಿ ರಾಜ್ಯಸಭೆ ಸಭಾಪತಿ ಎಂ. ವೆಂಕಯ್ಯ ನಾಯ್ಡು ವಿಫಲರಾಗಿದ್ದಾರೆ ಎಂದು ಇದೇ ವೇಳೆ ಪಿ. ಚಿದಂಬರಂ ಆಪಾದಿಸಿದರು.