ನವದೆಹಲಿ, ಆ 07 (DaijiworldNews/DB): ಭಯೋತ್ಪಾದಕ ಸಂಘಟನೆಗೆ ನಿಧಿ ಸಂಗ್ರಹಿಸುತ್ತಿದ್ದ ಇಸ್ಲಾಮಿಕ್ ಸ್ಟೇಟ್ನ ಸಕ್ರಿಯ ಸದಸ್ಯನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಶನಿವಾರ ಬಂಧಿಸಿದೆ.
ಬಂಧಿತನನ್ನು ದೆಹಲಿಯ ಬಟ್ಲಾ ಹೌಸ್ ನಿವಾಸಿ ಮೊಹ್ಸಿನ್ ಅಹ್ಮದ್ ಎಂದು ಗುರುತಿಸಲಾಗಿದೆ. ಬಟ್ಲಾ ಹೌಸ್ನಲ್ಲಿರುವ ಜೋಗಾಬಾಯಿ ಎಕ್ಸ್ಟೆನ್ಶನ್ ಬಳಿಯಿರುವ ಈತನ ಮನೆಯಿಂದಲೇ ಈತನ ಬಂಧನವಾಗಿದೆ. ನಿನ್ನೆಆತನ ಮನೆಯಲ್ಲಿ ಎನ್ಐಎ ಶೋಧ ಕಾರ್ಯ ನಡೆಸಿತ್ತು. ಮೂಲತಃ ಬಿಹಾರದ ಪಾಟ್ನಾದವನಾದ ಈತ ದೆಹಲಿಯಲ್ಲಿ ವಾಸಿಸುತ್ತಿದ್ದ. ಆನ್ಲೈನ್ ಮತ್ತು ಐಸಿಸ್ನ ಇತರೆ ಚಟುವಟಿಕೆಯಲ್ಲಿಯೂ ಈತ ಸಕ್ರಿಯನಾಗಿದ್ದ ಎಂದು ತನಿಖಾ ಸಂಸ್ಥೆ ಅಧಿಕೃತ ಮಾಹಿತಿ ನೀಡಿರುವುದಾಗಿ ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ಐಸಿಸ್ನ ತೀವ್ರಗಾಮಿ ಮತ್ತು ಸಕ್ರಿಯ ಸದಸ್ಯನಾಗಿದ್ದ ಈತ ಭಾರತ ಮತ್ತು ವಿದೇಶಗಳಲ್ಲಿ ಐಸಿಸ್ ಪರ ಒಲವು ಹೊಂದಿದ್ದವರಿಂದ ನಿಧಿ ಸಂಗ್ರಹ ಮಾಡುತ್ತಿದ್ದ. ಐಸಿಸ್ ಚಟುವಟಿಕೆಯನ್ನು ಬಲಗೊಳಿಸಲು ಸಂಗ್ರಹವಾದ ಹಣವನ್ನು ಸಿರಿಯಾ ಮತ್ತಿತರ ಸ್ಥಳಗಳಿಗೆ ಕ್ರಿಪ್ಟೋಕರೆನ್ಸಿ ರೂಪದಲ್ಲಿ ಕಳುಹಿಸುತ್ತಿದ್ದ. ಈ ಕಾರಣಕ್ಕಾಗಿಯೇ ಈತನ ವಿರುದ್ದ ಕಳೆದ ಜೂನ್ 25ರಂದು ಎನ್ಐಎ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿತ್ತು. ಈತನ ವಿರುದ್ದ ತನಿಖೆ ಪ್ರಗತಿಯಲ್ಲಿದೆ ಎಂದು ಭಯೋತ್ಪಾದನಾ ವಿರೋಧಿ ಸಂಸ್ಥೆ ತಿಳಿಸಿದೆ.