ಬೆಂಗಳೂರು, ಆ 07 (DaijiworldNews/DB): ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅದ್ಧೂರಿ ವಿವಾಹ ನೆರವೇರಿಸಿ ಕಾರು, ಚಿನ್ನಾಭರಣ, ನಗದು ನೀಡಿದ್ದರೂ ಹೆಚ್ಚಿನ ವರದಕ್ಷಿಣೆ ತರುವಂತೆ ಪತ್ನಿಗೆ ಪೀಡಿಸಿದ ಪತಿಯ ವಿರುದ್ದ ಬಸವನಗುಡಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾಸಗಿ ಕಂಪನಿ ಉದ್ಯೋಗಿ ಸುದೀಪ್ ವಿರುದ್ದ ಹೈದರಾಬಾದ್ ಮೂಲದ 28 ವರ್ಷದ ಸಂತ್ರಸ್ತೆ ದೂರು ನೀಡಿದ್ದಾಳೆ. ಸುದೀಪ್ ಮತ್ತು ದೂರುದಾರ ಮಹಿಳೆಯ ವಿವಾಹ 2021ರಲ್ಲಿ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಅದ್ಧೂರಿಯಾಗಿ ನಡೆದಿತ್ತು. 55 ಲಕ್ಷ ರೂ. ಮೌಲ್ಯದ ಮಿನಿ ಕೂಪರ್ ಕಾರು, 200 ಕೆಜಿ ಬೆಳ್ಳಿ, 4 ಕೆ.ಜಿ. ಚಿನ್ನಾಭರಣವನ್ನು ಈ ವೇಳೆ ವರದಕ್ಷಿಣೆಯಾಗಿ ಕೊಡಲಾಗಿತ್ತು. ಅಲ್ಲದೆ ಒಟ್ಟಾರೆ ವಿವಾಹಕ್ಕೆ ಆರು ಕೋಟಿ ರೂ.ಗಳನ್ನು ವಧುವಿನ ಕಡೆಯುವರು ಖರ್ಚು ಮಾಡಿದ್ದರು. ಇಷ್ಟೆಲ್ಲ ಖರ್ಚು ಮಾಡಿದ್ದರೂ, ಇದೀಗ ಪತಿ ಸುದೀಪ್ ಇನ್ನಷ್ಟು ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ ನೀಡಲಾರಂಭಿಸಿದ್ದ.
ಮಹಿಳೆಯ ತಂದೆಯ ಹೆಸರಿನಲ್ಲಿ ಎರಡು ಕಂಪೆನಿಗಳಿದ್ದು, ಅದನ್ನು ಆರೋಪಿ ಆಕೆಯ ಹೆಸರಿಗೆ ಮಾಡಿಸಿಕೊಂಡು ಲಾಭವನ್ನು ಪಡೆದುಕೊಂಡಿದ್ದಾನೆ. ಅಲ್ಲದೆ ಡ್ರಗ್ಸ್ ವ್ಯಸನಿಯಾಗಿರುವ ಆತ ಸ್ನೇಹಿತರನ್ನು ಮನೆಗೆ ಕರೆಸುತ್ತಿದ್ದನಲ್ಲದೆ, ಡ್ರಗ್ಸ್ ಅಮಲಿನಲ್ಲಿ ತನ್ನ ತಲೆ ಮೇಲೆ ಮೂತ್ರ ವಿಸರ್ಜಿಸಿ ವಿಕೃತಾನಂದ ಪಡೆಯುತ್ತಿದ್ದ ಎಂದು ಪತ್ನಿ ತನ್ನ ದೂರಿನಲ್ಲಿ ತಿಳಿಸಿದ್ದಾಳೆ. ಆತನನ್ನು ಪ್ರಶ್ನಿಸಿದರೆ ಅವಾಚ್ಯವಾಗಿ ಬೈಯುತ್ತಿದ್ದ. ಈ ವಿಚಾರವನ್ನು ಆತನ ಪಾಲಕರ ಬಳಿ ಹೇಳಿದಾಗ ಆತನಿಗೆ ಬುದ್ದಿ ಹೇಳುವುದು ಬಿಟ್ಟು ಪ್ರೋತ್ಸಾಹ ನೀಡಿದ್ದಾರೆ. ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಸಂತ್ರಸ್ತ ಮಹಿಳೆ ಉಲ್ಲೇಖಿಸಿದ್ದಾಳೆ.