ಮುಂಬೈ, ಆ 07 (DaijiworldNews/HR): ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ಮಗಳ ಮೈಮೇಲೆ ದುಷ್ಟಶಕ್ತಿಗಳಿವೆ ಎಂದು ಐದು ವರ್ಷದ ಬಾಲಕಿಯ ದೇಹದಿಂದ ದುಷ್ಟಶಕ್ತಿಗಳನ್ನು ಓಡಿಸಲು ವಾಮಾಚಾರ ಮಾಡುತ್ತಿದ್ದ ತಂದೆ, ತಾಯಿ ಆಕೆಯನ್ನು ಥಳಿಸಿ ಕೊಂದಿರುವ ಘಟನೆ ಬೆಳಕಿಗೆ ಬಂದಿದೆ.
ಬಾಲಕಿಯ ತಂದೆ ಸಿದ್ಧಾರ್ಥ್ ಚಿಮ್ನೆ (45), ತಾಯಿ ರಂಜನಾ (42) ಮತ್ತು ಚಿಕ್ಕಮ್ಮ ಪ್ರಿಯಾ ಬನ್ಸೋದ್ (32) ನನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ತಿಂಗಳು ಗುರು ಪೂರ್ಣಿಮೆಯಂದು ತನ್ನ ಪತ್ನಿ, 5 ಮತ್ತು 16 ವರ್ಷದ ಇಬ್ಬರು ಹೆಣ್ಣುಮಕ್ಕಳೊಂದಿಗೆ ತಕಲ್ಘಾಟ್ ಪ್ರದೇಶದ ದರ್ಗಾಕ್ಕೆ ಹೋಗಿದ್ದು, ಅಂದಿನಿಂದ ತನ್ನ ಕಿರಿಯ ಮಗಳ ವರ್ತನೆಯಲ್ಲಿ ಹಲವು ಬದಲಾವಣೆಗಳಾಗಿದ್ದು, ಬಾಲಕಿ ಕೆಲವು ದುಷ್ಟ ಶಕ್ತಿಗಳ ಪ್ರಭಾವಕ್ಕೆ ಒಳಗಾಗಿದ್ದಾಳೆಂದು ನಂಬಿ, ಅವುಗಳನ್ನು ಓಡಿಸಲು 'ಬ್ಲಾಕ್ ಮ್ಯಾಜಿಕ್' ಮಾಡಲು ನಿರ್ಧರಿಸಿ ಬಾಲಕಿಯ ಪೋಷಕರು ಮತ್ತು ಚಿಕ್ಕಮ್ಮ ರಾತ್ರಿಯಲ್ಲಿ ವಾಮಾಚಾರದ ಆಚರಣೆಗಳನ್ನು ಮಾಡಿದ್ದಾರೆ.
ಇನ್ನು ವಾಮಚಾರ ಮಾಡಿರುವ ವಿಡಿಯೋವನ್ನು ಸಹ ಚಿತ್ರೀಕರಿಸಿದ್ದು, ಪೊಲೀಸರು ಆರೋಪಿಗಳ ಫೋನ್ನಿಂದ ವಿಡಿಯೋ ವಶಪಡಿಸಿಕೊಂಡಿದ್ದಾರೆ.
ವಿಡಿಯೋದಲ್ಲಿ ಆರೋಪಿಗಳು ಅಳುತ್ತಿದ್ದ ಹುಡುಗಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಿರುವುದು ಕಂಡುಬಂದಿದೆ. ಮಗುವಿಗೆ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ ಅವರ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗಿಲ್ಲ ಎಂದು ಪೊಲೀಸರು ಹೇಳಿದರು.
ಇನ್ನು ಇದೇ ವೇಳೆ ಮೂವರು ಆರೋಪಿಗಳು ಮಗುವಿಗೆ ಕಪಾಳಮೋಕ್ಷ ಮಾಡಿ ಥಳಿಸಿದ್ದಾರೆ, ನಂತರ ಬಾಲಕಿ ಪ್ರಜ್ಞಾಹೀನಳಾಗಿ ಬಿದ್ದಿದ್ದಾಳೆ. ಬಳಿಕ ಆರೋಪಿಗಳು ಮಗುವನ್ನು ದರ್ಗಾಕ್ಕೆ ಕರೆದೊಯ್ದು ಅಲ್ಲಿಂದ ಆಕೆಯನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ಅಲ್ಲಿಂದ ಆರೋಪಿಗಳು ಓಡಿ ಹೋಗಿದ್ದು, ಆಸ್ಪತ್ರೆಯ ವೈದ್ಯರು ಬಾಲಕಿ ಮೃತಪಟ್ಟಿದ್ದಾಳೆ ಎಂದು ಘೋಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.