ಮೈಸೂರು, ಆ 07 (DaijiworldNews/HR): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2022ರ ಗಜಪಯಣಕ್ಕೆ ಇಂದು ಸಚಿವ ಎಸ್.ಟಿ. ಸೋಮಶೇಖರ್ ಚಾಲನೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ಸೋಮಶೇಖರ್, ಇಂದು 07-08-22 ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಗ್ರಾಮದಲ್ಲಿ ಬೆಳಗ್ಗೆ 9.01 ರಿಂದ 9.35ರ ಕನ್ಯಾ ಲಗ್ನದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವುದರ ಮೂಲಕ ನಾಡಹಬ್ಬ ಮೈಸೂರು ದಸರಾ 2022ಕ್ಕೆ ಮುನ್ನುಡಿ ಬರೆಯುವ ಗಜಪಯಣಕ್ಕೆ ಅರಣ್ಯ ಸಚಿವರಾದ ಉಮೇಶ್ ಕತ್ತಿ ಅವರೊಂದಿಗೆ ಚಾಲನೆ ನೀಡಲಾಯಿತು ಎಂದಿದ್ದಾರೆ.
ಇನ್ನು ಮೊದಲ ಹಂತದಲ್ಲಿ 9 ಆನೆಗಳು ಮೈಸೂರಿಗೆ ಪಯಣ ಬೆಳಸಲಿದ್ದು, ಅಭಿಮನ್ಯು ನೇತೃತ್ವದಲ್ಲಿ ಮಹೇಂದ್ರ, ಗೋಪಾಲಸ್ವಾಮಿ, ಅರ್ಜುನ, ಭೀಮ, ಧನಂಜಯ, ಕಾವೇರಿ, ಚೈತ್ರಾ, ಲಕ್ಷ್ಮೀ ಆನೆಗಳು ಮೈಸೂರಿಗೆ ಪ್ರಯಾಣ ಬೆಳಸಲಿವೆ.