ಶಿವಮೊಗ್ಗ, ಆ 06 (DaijiworldNews/DB): ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಈ ಜನ್ಮದಲ್ಲಿ ಒಂದಾಗುವುದಿಲ್ಲ. ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂಬುದು ಅವರ ಭ್ರಮೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮೋತ್ಸವ ಕಾರ್ಯಕ್ರಮದ ಬಳಿಕ ಆ ಪಕ್ಷದಲ್ಲಿ ಆಂತರಿಕ ಗೊಂದಲ ಜಾಸ್ತಿಯಾಗಿದೆ. ಸಿದ್ದರಾಮಯ್ಯ, ಡಿಕೆಶಿ ಆಲಿಂಗನ ಮನಸ್ಸಿನಿಂದ ಬಂದಿರುವುದಲ್ಲ. ರಾಹುಲ್ ಗಾಂಧಿ ಅಪ್ಪಿಕೊಳ್ಳಲು ಮಾಡಿದ ಸಲಹೆಯಂತೆ ಅವರು ಮಾಡಿದ್ದಾರೆ. ಅವರಿಬ್ಬರು ಈ ಜನ್ಮದಲ್ಲಿ ಒಂದಾಗುವುದಿಲ್ಲ ಎಂದರು.
ಕಾಂಗ್ರೆಸ್ ನಾಯಕರಿಗೆ ತಾವು ಅಧಿಕಾರಕ್ಕೆ ಬರುತ್ತೇವೆಂಬ ಕನಸು ಬೀಳುತ್ತದೆ. ಆ ಕನಸು ಅವರನ್ನು ಬಿಟ್ಟರೆ ಬೇರಾರಿಗೂ ಬೀಳುವುದಿಲ್ಲ. ಈಗಾಗಲೇ ಅಯೋಗ್ಯರು ಎಂದು ಅವರನ್ನು ಜನ ಕಿತ್ತು ಬಿಸಾಕಿದ್ದಾರೆ. ಬಡವರ ಪರ ಆಡಳಿತ ನಡೆಸದ ಕಾರಣ ಆ ಪಕ್ಷ ಈಗಾಗಲೇ ನಿರ್ನಾಮವಾಗಿದೆ. ಆದರೂ ಅಧಿಕಾರದ ಭ್ರಮೆಯಲ್ಲೇ ಅವರಿದ್ದಾರೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ರಾಜ್ಯದಲ್ಲಿ 150 ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ ಬರುವುದು ಖಚಿತ ಎಂದವರು ಇದೇ ವೇಳೆ ತಿಳಿಸಿದರು.