ನವದೆಹಲಿ, ಆ 06 (DaijiworldNews/DB): ರಾಮ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿದ ದಿನದಂದು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ಮಾಡುವ ಮೂಲಕ ಕಾಂಗ್ರೆಸ್ಸಿಗರು ಶ್ರೀ ರಾಮನಿಗೆ ಅವಮಾನ ಮಾಡಿದ್ದಾರೆಂಬ ಕೇಂದ್ರ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ತಿರುಗೇಟು ನೀಡಿದ್ದಾರೆ. ಇದು ರೋಗಗ್ರಸ್ಥ ಮನಸ್ಥಿತಿ ಎಂದು ಜೈರಾಮ್ ರಮೇಶ್ ಕಿಡಿ ಕಾರಿದ್ದಾರೆ.
ಬೆಲೆ ಏರಿಕೆ, ನಿರುದ್ಯೋಗ, ಹಣದುಬ್ಬರ ಖಂಡಿಸಿ ಶುಕ್ರವಾರ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿತ್ತು. ನಾಯಕರು ಕಪ್ಪು ಬಟ್ಟೆ ಧರಿಸಿ ರಾಷ್ಟ್ರಪತಿ ಭವನದತ್ತ ಮೆರವಣಿಗೆ ಹೊರಟಿದ್ದರು. ಕಪ್ಪು ಬಟ್ಟೆ ಧರಿಸಿರುವುದನ್ನು ಖಂಡಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಪ್ರಧಾನಿ ಮೋದಿಯವರು ಕಳೆದ ವರ್ಷ ಇದೇ ದಿನದಂದು ರಾಮ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಆ ದಿನದಂದೇ ಕಾಂಗ್ರೆಸ್ಸಿಗರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ಮಾಡುವ ಮೂಲಕ ಶ್ರೀ ರಾಮನಿಗೆ ಅವಮಾನ ಮಾಡಿದ್ದಾರೆ. ಇದು ಒಂದು ಧರ್ಮದವರನ್ನು ಓಲೈಸುವ ಭಾಗವಾಗಿದೆ ಎಂದಿದ್ದರು.
ಅಮಿತ್ ಶಾ ಹೇಳಿಕೆಗೆ ಟ್ವೀಟ್ ಮೂಲಕ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಜೈರಾಮ್ ರಮೇಶ್, ಬೆಲೆ ಏರಿಕೆ, ನಿರುದ್ಯೋಗ, ಜಿಎಸ್ಟಿ ವಿರುದ್ದ ಕಾಂಗ್ರೆಸ್ ಪ್ರತಿಭಟಿಸಿತ್ತು. ಆದರೆ ಪಕ್ಷದ ಪ್ರಜಾಸತ್ತಾತ್ಮಕ ಪ್ರತಿಭಟನೆಯನ್ನು ತಿರುಚಿ ದುರುದ್ದೇಶಪೂರಿತ ಆಯಾಮ ನೀಡುವ ಪ್ರಯತ್ನ ನಡೆಯುತ್ತಿದೆ. ಇದು ಅವರ ಹತಾಶ ಪ್ರಯತ್ನವಾಗಿದೆ. ಅಲ್ಲದೆ ರೋಗಗ್ರಸ್ಥ ಮನಸ್ಥಿತಿಯನ್ನು ಇದು ಸೂಚಿಸುತ್ತದೆ ಎಂದಿದ್ದಾರೆ.
ಅಮಿತ್ ಶಾ ಅವರಿಗೆ ಕಾಂಗ್ರೆಸ್ನ ಹೋರಾಟದ ಬಿಸಿ ಮುಟ್ಟಿದೆ ಎಂದೂ ಜೈ ರಾಮ್ ರಮೇಶ್ ಹೇಳಿದ್ದಾರೆ.