ಲಖನೌ, ಆ 06 (DaijiworldNews/DB): ನೋಯ್ಡಾದ ಹೌಸಿಂಗ್ ಸೊಸೈಟಿಯಲ್ಲಿ ಮಹಿಳೆಯೊಬ್ಬರ ಮೇಲೆ ಕೈ ಮಾಡಿದ ಬಿಜೆಪಿ ನಾಯಕನನ್ನು ತತ್ಕ್ಷಣ ಬಂಧಿಸಿ ವಿಚಾರಣೆಗೊಳಪಡಿಸಬೇಕೆಂದು ರಾಷ್ಟ್ರೀಯ ಮಹಿಳಾ ಆಯೊಗ ಆಗ್ರಹಿಸಿದೆ.
ಬಿಜೆಪಿ ನಾಯಕ ಶ್ರೀಕಾಂತ್ ತ್ಯಾಗಿ ಅವರು ನೊಯ್ಡಾ ಸೆಕ್ಟರ್-93ಬಿನಲ್ಲಿರುವ ಗ್ರಾಂಡ್ ಒಮ್ಯಾಕ್ಸಿ ಸೊಸೈಟಿಯ ಮಹಿಳಾ ನಿವಾಸಿಯೊಬ್ಬರನ್ನು ನಿಂದಿಸಿ, ಹಲ್ಲೆ ಮಾಡಿದ್ದಾರೆಂದು ಶುಕ್ರವಾರ ನೊಯ್ಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಈವರೆಗೆ ಅವರ ಬಂಧನ ಆಗಿಲ್ಲ. ಹೀಗಾಗಿ ನಾಯಕನ ವಿರುದ್ದ ಎಫ್ಐಆರ್ ದಾಖಲಿಸಿ ಶೀಘ್ರ ಬಂಧಿಸಬೇಕು. ಅಲ್ಲದೆ, ಪಾರದರ್ಶಕ ತನಿಖೆ ನಡೆಸಬೇಕು ಎಂದು ಎನ್ಸಿಡಬ್ಲ್ಯು ಮುಖ್ಯಸ್ಥೆ ರೇಖಾ ಶರ್ಮಾ ಅವರು ಉತ್ತರ ಪ್ರದೇಶದ ಡಿಜಿಪಿಯವರನ್ನು ಒತ್ತಾಯಿಸಿದ್ದಾರೆ.
ಗ್ರಾಂಡ್ ಒಮ್ಯಾಕ್ಸಿ ಸೊಸೈಟಿಯಲ್ಲಿ ಶ್ರೀಕಾಂತ್ ತ್ಯಾಗಿ ಗಿಡಗಳನ್ನು ನೆಡಲು ಮುಂದಾದಾಗ ಇದು ನಿಯಮಗಳಿಗೆ ವಿರುದ್ದವಾಗಿದೆ ಎಂದು ಮಹಿಳೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ನನಗೆ ಗಿಡ ನೆಡಲು ಹಕ್ಕಿದೆ ಎಂದು ಶ್ರೀಕಾಂತ್ ವಾದಿಸಿದ್ದರು. ಇಬ್ಬರ ನಡುವೆ ವಾಗ್ವಾದ ನಡೆದು ತ್ಯಾಗಿ ಅವರು ಮಹಿಳೆಯನ್ನು ಕೆಟ್ಟ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ವ್ಯಕ್ತವಾಗಿತ್ತು. ಅಲ್ಲದೆ ಈ ವೀಡಿಯೋವೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ತ್ಯಾಗಿ ವಿರುದ್ಧ ಭಾರತೀಯ ಸಂಹಿತಿಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ನೋಯ್ಡಾ ಪೊಲೀಸರು ಪ್ರಕರಣ ದಾಖಲಿಸಿದ್ದರು.