ಉತ್ತರಪ್ರದೇಶ, ಆ 06 (DaijiworldNews/DB): ರಕ್ಷಾಬಂಧನ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಮಹಿಳೆಯರಿಗೆ ಬರ್ಜರಿ ಆಫರ್ ನೀಡಿದೆ. ಆಗಸ್ಟ್ 10 ರ ಮಧ್ಯರಾತ್ರಿಯಿಂದ 12ರ ಮಧ್ಯರಾತ್ರಿಯವರೆಗೆ 48 ಗಂಟೆಗಳ ಕಾಲ ಉತ್ತರ ಪ್ರದೇಶ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡಬಹುದಾಗಿದೆ.
ಸಹೋದರನಿಗೆ ತಿಲಕವಿಟ್ಟು ಸಹೋದರಿ ರಾಕಿ ಕಟ್ಟಿದರೆ ನಿನ್ನ ರಕ್ಷಣೆ ನನ್ನ ಹೊಣೆ ಎಂದು ಸಹೋದರ ಸಹೋದರಿಗೆ ಅಭಯ ನೀಡುವ ಹಿನ್ನೆಲೆ ಹೊಂದಿರುವ ಹಬ್ಬವೇ ರಕ್ಷಾಬಂಧನ. ಈ ಹಬ್ಬದ ಆಚರಣೆಯಾರ್ಥವಾಗಿ ಯೋಗಿ ಸರ್ಕಾರ ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿದೆ. ಈ ಕುರಿತು ಸ್ವತಃ ಸಿಎಂ ಯೋಗಿ ಆದಿತ್ಯನಾಥ್ ಅವರೇ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಒಂದೆಡೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ದೇಶಾದ್ಯಂತ ಮನೆಮನೆಗಳಲ್ಲಿ ರಾಷ್ಟ್ರಧ್ವಜ ಅಭಿಯಾನ ನಡೆಯುತ್ತಿದೆ. ಈ ಮಧ್ಯೆ ಉತ್ತರ ಪ್ರದೇಶ ಸರ್ಕಾರ ರಕ್ಷಾ ಬಂಧನಕ್ಕೆ ಮಹಿಳೆಯರಿಗೆ ಈ ಹೊಸ ಉಡುಗೊರೆ ನೀಡಿದೆ.