ನವದೆಹಲಿ, ಆ 06 (DaijiworldNews/HR): ಉಪರಾಷ್ಟ್ರಪತಿ ಆಯ್ಕೆಗೆ ಮತದಾನ ಆರಂಭವಾಗಿದ್ದು, ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಜಗದೀಪ್ ಧನಕರ್ ಮತ್ತು ವಿರೋಧ ಪಕ್ಷಗಳ ಸಹಮತದ ಅಭ್ಯರ್ಥಿಯಾಗಿ ಕಾಂಗ್ರೆಸ್ ನಾಯಕಿ ಮಾರ್ಗರೇಟ್ ಆಳ್ವ ಕಣಕಿಳಿದಿದ್ದಾರೆ.
ಉಪ ರಾಷ್ಟ್ರಪತಿಗಳ ಆಯ್ಕೆಗೆ ಸಂಸತ್ತಿನ ಉಭಯ ಸದನಗಳ ಸದಸ್ಯರು ಮತ ಹಾಕಲಿದ್ದು, ಇಂದು ಸಂಜೆ ವೇಳೆಗೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಮಾರ್ಗರೇಟ್ ಆಳ್ವ(80 ವರ್ಷ) ಅವರು ಕಾಂಗ್ರೆಸ್ ಹಿರಿಯ ನಾಯಕಿಯಾಗಿದ್ದು, ರಾಜಸ್ಥಾನ ಮತ್ತು ಉತ್ತರಾಖಂಡದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ.
ಇನ್ನು ಧನ್ ಕರ್(71 ವರ್ಷ) ಅವರು ಸಮಾಜವಾದಿ ಹಿನ್ನೆಲೆ ಹೊಂದಿರುವ ರಾಜಸ್ಥಾನದ ಜಾಟ್ ಸಮುದಾಯದ ನಾಯಕರಾಗಿದ್ದಾರೆ.
ಲೋಕಸಭೆಯಲ್ಲಿ 23 ಮತ್ತು ರಾಜ್ಯಸಭೆಯಲ್ಲಿ 16 ಸಂಸದರನ್ನು ಹೊಂದಿರುವ ತೃಣಮೂಲ ಕಾಂಗ್ರೆಸ್ ಉಪರಾಷ್ಟ್ರಪತಿ ಚುನಾವಣೆಯಿಂದ ದೂರ ಉಳಿಯಲು ನಿರ್ಧರಿಸಿದೆ ಎನ್ನಲಾಗಿದೆ.