ಶಿವಮೊಗ್ಗ, ಆ 06 (DaijiworldNews/DB): ದ.ಕ. ಜಿಲ್ಲಾ ಬಿಜೆಪಿ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಹಂತಕರು ಕೇರಳದವರಲ್ಲ, ಸ್ಥಳೀಯರು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಈವರೆಗೆ ಪ್ರವೀಣ್ ಹಂತಕರು ಕೇರಳಿಗರೇ ಎಂದು ಹೇಳಲಾಗಿತ್ತು. ಆದರೆ ಇದೀಗ ಸ್ಥಳೀಯರೇ ನಡೆಸಿದ ಕೃತ್ಯ ಎಂಬುದು ಸ್ಪಷ್ಟವಾಗಿದೆ. ಸುಳ್ಯ ಮತ್ತು ಬೆಳ್ಳಾರೆಯ ಮೂಲದ ಇಬ್ಬರು ಪ್ರಮುಖ ಆರೋಪಿಗಳು. ಕೇರಳದವರ ಕೃತ್ಯ ಎಂದು ಬಿಂಬಿಸಲು ಕೇರಳ ನೋಂದಣಿ ಹೊಂದಿರುವ ಬೈಕ್ನ್ನು ಕೃತ್ಯದ ವೇಳೆ ಬಳಸಿಕೊಳ್ಳಲಾಗಿದೆ ಎಂದರು.
ಹಲಾಲ್ ಕಟ್, ಜಟ್ಕಾ ಕಟ್ ವಿವಾದವೇ ಹತ್ಯೆಗೆ ಕಾರಣವಾಗಿದೆ. ಅಲ್ಲದೆ ಮಸೂದ್ ಹತ್ಯೆಗೆ ಪ್ರತೀಕಾರವಾಗಿಯೂ ಈ ಕೊಲೆ ನಡೆದಿದೆ ಎಂಬುದು ತನಿಖಾ ಸಂಸ್ಥೆಗಳು ತನಿಖೆ ನಡೆಸಿದ ವೇಳೆ ತಿಳಿದು ಬಂದಿದೆ. ಹಂತಕರು ಕೃತ್ಯ ಎಸಗಿ ಕೇರಳಕ್ಕೆ ತೆರಳಿದ್ದರು. ಬಳಿಕ ಮೊಬೈಲ್ನ್ನು ಮನೆಯಲ್ಲೇ ಬಿಟ್ಟು ಊರೂರು ಅಲೆಯುತ್ತಿದ್ದಾರೆ. ಮುಂದಿನ ಎರಡ್ಮೂರು ದಿನಗಳೊಳಗೆ ಪ್ರಮುಖ ಆರೋಪಿಗಳ ಬಂಧನ ನಡೆಯಲಿದೆ ಎಂದವರು ಇದೇ ವೇಳೆ ಸುಳಿವು ನೀಡಿದರು.
ಆರೋಪಿಗಳು ಯಾವ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದರು ಸೇರಿದಂತೆ ಅವರ ಹಿನ್ನೆಲೆ ತಿಳಿಯುವ ಪ್ರಯತ್ನ ನಡೆಯುತ್ತಿದೆ. ಮತಾಂಧ ಶಕ್ತಿಗಳಿಗೆ ಕೃತ್ಯ ಎಸಗಲು ವಿದೇಶೀ ಶಕ್ತಿಗಳ ಕೈವಾಡದ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ. ಆರೋಪಿಗಳು ಹೊರ ದೇಶಗಳಿಗೆ ತೆರಳದಂತೆ ಮುಂಜಾಗ್ರತೆ ವಹಿಸಲು ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಇದೇ ವೇಳೆ ಗೃಹ ಸಚಿವರು ತಿಳಿಸಿದರು.
ಪ್ರಕರಣ ಎನ್ಐಎ ತನಿಖೆಗೆ
ಬೆಳ್ಳಾರೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಎನ್ಐಎಗೆ ವಹಿಸಲಾಗುವುದು ಎಂದು ಈ ಹಿಂದೆಯೇ ಸಿಎಂ ಬಸವರಾಜ ಬೊಮ್ಮಾಯಿಯವರು ಹೇಳಿದ್ದರು. ಅದರಂತೆ ಇದೀಗ ತನಿಖೆ ಕೈಗೆತ್ತಿಕೊಳ್ಳುವಂತೆ ರಾಷ್ಟ್ರೀಯ ತನಿಖಾ ದಳಕ್ಕೆ ಕೇಂದ್ರ ಗೃಹ ಸಚಿವಾಲಯ ಲಿಖಿತವಾಗಿ ಆದೇಶ ಹೊರಡಿಸಿದೆ. ಕೇಂದ್ರ ಗೃಹ ಇಲಾಖೆಯ ಅಧೀನ ಕಾರ್ಯದರ್ಶಿ ವಿಪುಲ್ ಅಲೋಕ್ ಆ .3 ರಂದು ಆದೇಶ ಹೊರಡಿಸಿದ್ದಾರೆ.