ನವದೆಹಲಿ, ಆ 06 (DaijiworldNews/MS): ಪಾಕಿಸ್ತಾನದ ಚುನಾವಣಾ ಆಯೋಗವೂ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ (ಪಿಟಿಐ)ಪಕ್ಷಕ್ಕೆ ಸಂದಾಯದವಾದ ದೇಣಿಗೆಯ ವಿವರವನ್ನು ಮೂರು ದಿನಗಳ ಹಿಂದೆ ಬಿಡುಗಡೆ ಮಾಡಿದ್ದು, ಇದರಲ್ಲಿ ಹಲವು ಭಾರತೀಯರ ಹೆಸರು ತಳುಕು ಹಾಕಿಕೊಂಡಿದೆ.
ಈ ಪೈಕಿ ಮಂಗಳೂರು ಮೂಲದ ಅಮೆರಿಕಾ ಉದ್ಯಮಿ ರೊಮಿತಾ ಶೆಟ್ಟಿ ಎಂಬವರು ನೀಡಿದ 13,750 ಡಾಲರ್ ಹಣ. ಅಂದರೆ ಪಾಕಿಸ್ತಾನ ಕರೆನ್ಸಿಯಲ್ಲಿ೩೦.೮೫ ಲಕ್ಷ ರೂಪಾಯಿಯನ್ನೂ ಅಕ್ರಮ ದೇಣಿಗೆ ಎಂದು ಘೋಷಿಸಿದೆ. ರೊಮಿತಾ ಶೆಟ್ಟಿ ಅವರ ಹೆಸರು ಕೇಳಿಬಂದ ಹಿನ್ನಲೆಯಲ್ಲಿ ನೆಟ್ಟಿಗರು ಸೋಶಿಯಲ್ ಮೀಡಿಯಾ ಹಾಗೂ ಗೂಗಲ್ ಸರ್ಚ್ ಪೇಜ್ ನಲ್ಲಿ ಅವರ ಬಗ್ಗೆ ಹುಟುಕಾಟ ನಡೆಸಿದ್ದಾರೆ.
ಯಾರು ರೊಮಿತಾ ಶೆಟ್ಟಿ
ಮಂಗಳೂರು ಮೂಲದ ರೊಮಿತಾ ಶೆಟ್ಟಿ , ಪಾಕಿಸ್ತಾನ ಮೂಲದ ಅಮೆರಿಕನ್ ವ್ಯಕ್ತಿ, ಉದ್ಯಮಿ ನಜೀರ್ ಅಜೀಜ್ ಅಹ್ಮದ್ ಎಂಬವರ ಪತ್ನಿಯಾಗಿದ್ದಾರೆ. ಅಮೆರಿಕಾಗದ ನ್ಯೂಯಾರ್ಕ್ ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಡಿಮಿಯಾವೊ ಅಹ್ಮದ್ ಕ್ಯಾಪಿಟಲ್ ಎಲ್ ಎಲ್ ಎಲ್(ಡಿಎ ಕ್ಯಾಪಿಟಲ್) ಎಂಬ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ. ಕೊಲಂಬಿಯಾ ವಿಶ್ವವಿದ್ಯಾಲಯದ ಗ್ಲೋಬಲ್ ಥಾಟ್ ವಿಭಾಗದ ಸಲಹೆಗಾರ್ತಿಯಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಬ್ಲೂಮ್ ಬರ್ಗ್ ಹೇಳಿದೆ.
ಅರ್ಥಶಾಸ್ತ್ರದಲ್ಲಿ 27 ವರ್ಷಗಳ ವೃತ್ತಿ ಅನುಭವವನ್ನು ಹೊಂದಿದ್ದಾರೆ. ಭಾರತದ ರಾಜಧಾನಿ ನವದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ತಮ್ಮ ಬಿಎ ಹಾನರ್ಸ್ ಪೂರ್ಣಗೊಳಿಸಿದರು. ನಂತರ, ಅವರು ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಇಂಟರ್ನ್ಯಾಷನಲ್ ರಿಲೇಶನ್ಸ್ ಪದವಿಯಲ್ಲಿ ಎಂಎ ಪಡೆದಿದ್ದಾರೆ.
ಇದರೊಂದಿಗೆ ಭಾರತೀಯರಾದ ಇಂದರ್ ದೋಸಾಂಜ್, ವಿರಳ್ ಲಾಲ್, ಮುರ್ತಾಜಾ ಲೋಖಂಡವಾಲ, ಚರಣಜೀತ್ ಸಿಂಗ್, ವರ್ಷಾ ಲಾತ್ರ ಮೊದಲಾದವರ ಹೆಸರು ಈ ಪಟ್ಟಿಯಲ್ಲಿವೆ.