ನವದೆಹಲಿ, ಆ 05 (DaijiworldNews/DB): ಗುಪ್ತಾಂಗದ ಸಮಸ್ಯೆಗೆ ಸ್ತ್ರೀರೋಗ ತಜ್ಞರ ಬದಲಾಗಿ ದಂತ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆದ ಗಗನಸಖಿಯೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನವದೆಹಲಿಯ ಗುರುಗ್ರಾಮದಲ್ಲಿ ನಡೆದಿದೆ.
ನಾಗಾಲ್ಯಾಂಡ್ನ ಗಗನಸಖಿ ರೋಸಿ ಸಂಗ್ಮಾ (24) ಮೃತಪಟ್ಟವರು. ಗುಪ್ತಾಂಗದಲ್ಲಿ ರಕ್ತಸ್ರಾವ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯಲೆಂದು ಬೇರೆಯವರ ಸಲಹೆ ಮೇರೆಗೆ ಆಲ್ಫಾ ಹೆಲ್ತ್ ಕೇರ್ನ ವ್ಯವಸ್ಥಾಪಕ ನಿರ್ದೇಶಕ ಡಾ.ಅನುಜ್ ಬಿಸ್ನೋಯ್ ಮತ್ತು ದಂತವೈದ್ಯೆ ಅಂಜಲಿ ಆಶ್ಕ್ ಅವರ ಬಳಿ ಚಿಕಿತ್ಸೆಗಾಗಿ ಸಂಗ್ಮಾ ತೆರಳಿದ್ದರು. ಆದರೆ ಅವರು ದಂತ ವೈದ್ಯರು ಎಂಬುದು ತಿಳಿಯದ ಆಕೆ ಸ್ತ್ರೀರೋಗ ತಜ್ಞರೇ ಇರಬಹುದು ಎಂದು ಭಾವಿಸಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಆದರೆ ಸ್ತ್ರೀರೋಗ ವಿಷಯದಲ್ಲಿ ಅನುಭವ ಇರದ ದಂಪತಿ ನೀಡಿದ ಚಿಕಿತ್ಸೆಯಿಂದ ಸಂಗ್ಮಾ ಪ್ರಾಣ ಕಳೆದುಕೊಂಡಿದ್ದಾರೆ.
ಮೃತ ರೋಸಿ ಸಂಗ್ಮಾ ಅವರ ಸಂಬಂಧಿ ಸ್ಯಾಮ್ಯುಯೆಲ್ ಸಂಗ್ಮಾ ಅವರು ಸಂಗ್ಮಾ ಸಾವಿಗೆ ವೈದ್ಯಕೀಯ ನಿರ್ಲಕ್ಷ್ಯ ಕಾರಣ ಎಂದು ಆಸ್ಪತ್ರೆ ವಿರುದ್ದ ದೂರು ದಾಖಲಿಸಿದ್ದರು. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ವೈದ್ಯ ದಂಪತಿ ವಿರುದ್ದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 (ನಿರ್ಲಕ್ಷ್ಯದ ಕಾರಣ ಸಾವು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ಸಿಬಿಐ ಘಟನೆಯ ತನಿಖೆ ನಡೆಸುತ್ತಿದೆ. ವೈದ್ಯರ ನಿರ್ಲಕ್ಷ್ಯ ತನಿಖೆ ವೇಳೆ ತಿಳಿದು ಬಂದಿದೆ ಎಂಬುದಾಗಿ ಸಿಬಿಐ ಹೇಳಿದೆ. ಅಲ್ಲದೆ ರೋಸಿಯ ಗಂಭೀರ ಸ್ಥಿತಿಯ ಬಗ್ಗೆ ಮಾಹಿತಿ ನೀಡಲಾಗಿದ್ದರೂ, ಸ್ತ್ರೀರೋಗ ಸಮಸ್ಯೆಗಳ ನಿರ್ವಹಣೆ ಅನುಭವ ಇಲ್ಲದ ದಂತವೈದ್ಯೆ ಅಶ್ಕ್ಗೆ ಪ್ರಕರಣದ ಹೊಣೆಯನ್ನು ಬಿಶ್ನೋಯ್ ವಹಿಸಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿದೆ ಎಂದು ವರದಿಯಾಗಿದೆ.