ಹೈದರಾಬಾದ್, ಆ 05 (DaijiworldNews/HR) : ಕಳ್ಳನೊಬ್ಬ ಮಹಿಳೆಯ ಕಣ್ಣಿಗೆ ಖಾರದ ಪುಡಿ ಎರಚಿದರೂ, ಆತನನ್ನು ಹಿಡಿಯುವ ರಭಸದಲ್ಲಿ ಜಾರಿ ಬಿದ್ದು ಕಾಲಿಗೆ ಏಟಾದರೂ ಬಿಡದೇ ಆಕೆ ಕಳ್ಳನನ್ನು ಹಿಡಿದುಕೊಂಡಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಸಿರೀಶಾ ಎಂಬ ಗೃಹಿಣಿ ಸೂರ್ಯಪೇಟೆ ಜಿಲ್ಲೆ ಮೋಟೆ ತಾಲೂಕಿನ ಅಪ್ಪಣ್ಣಗುಡೆಂ ಗ್ರಾಮದ ಬಾಲಾಜಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಪಕ್ಕದ ಇನ್ನೆರಡು ಮನೆಗಳು ಬಾಡಿಗೆಗೆ ಇವೆ ಎಂದು ಮಾಲೀಕರು ಬೋರ್ಡ್ ಹಾಕಿದ್ದರು.
ಕಳ್ಳನೊಬ್ಬ ಈ ಬೋರ್ಡ್ ನೋಡಿ ಮನೆಯನ್ನು ತಾನು ನೋಡಬೇಕು ಎಂದಿದ್ದಾನೆ. ಆ ಸಮಯದಲ್ಲಿ ಮಾಲೀಕರು ಬೇರೆ ಕಡೆ ಹೋಗಿದ್ದರಿಂದ ಸಿರೀಶಾ ಅವರು ಮಾಲೀಕರು ಇಲ್ಲ ಎಂದು ಆತನಿಗೆ ಹೇಳಿದ್ದಾರೆ. ಆಗ ಆ ಕಳ್ಳ ನಾನು ಇಲ್ಲಿರುವ ನಂಬರ್ ಪಡೆದು ಮಾಲೀಕರಿಗೆ ಕರೆ ಮಾಡಿದ್ದೇನೆ. ಅವರು ನೀವು ಮನೆ ತೋರಿಸುತ್ತೀರಿ ಎಂದಿದ್ದಾರೆ ಎಂದು ಹೇಳಿದ್ದಾನೆ.
ಇನ್ನು ಕಳ್ಳನ ಮಾತನ್ನು ನಂಬಿದ ಸಿರೀಶಾ ತಮ್ಮ ಬಳಿ ಮಾಲೀಕರು ಕೊಟ್ಟಿರುವ ಕೀಲಿಯಿಂದ ಮನೆ ತೆರೆದು ತೋರಿಸಿದ್ದು, ಮನೆಯ ಬಾಗಿಲು ತೆರೆಯಬೇಕು ಎನ್ನುವಷ್ಟರಲ್ಲಿ ಕಳ್ಳ ಸಿರೀಶಾ ಅವರ ಕಣ್ಣಿಗೆ ಖಾರದ ಪುಡಿ ಎರಚಿ ಅವರ ಕೊರಳಿನಲ್ಲಿದ್ದ 30 ಗ್ರಾಂ ಬಂಗಾರದ ತಾಳಿಯನ್ನು ಕಿತ್ತುಕೊಂಡು ಕೆಳಗೆ ಓಡಿ ಹೋಗಿದ್ದಾನೆ. ಆದರೆ ಕಣ್ಣು ಖಾರದ ಪುಡಿಯಿಂದ ಉರಿಯುತ್ತಿದ್ದರೂ ಅದನ್ನು ಉಜ್ಜಿಕೊಂಡು ಕಳ್ಳನನ್ನು ಸಿರೀಶಾ ಬೆನ್ನಟ್ಟಿದ್ದಾರೆ.
ಓಡುವಾಗ ಆಯತಪ್ಪಿ ಬಿದ್ದು ಸಿರೀಶಾ ಅವರ ಕಾಲಿಗೆ ಗಾಯಗಲಾಗಿದ್ದರೂ, ಕಳ್ಳ ಬೈಕ್ ಶುರು ಮಾಡಿದಾಗ ಅದನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಇದರಿಂದ ಕಳ್ಳ ಬೈಕ್ ನಿಯಂತ್ರಣ ಕಳೆದುಕೊಂಡು ಕೆಳಕ್ಕೆ ಬಿದ್ದಿದ್ದಾನೆ.
ಈ ಸಂಧರ್ಭದಲ್ಲಿ ಸಿರೀಶಾ ಜೋರಾಗಿ ಕೂಗಿಕೊಂಡಿದ್ದರಿಂದ ಇಬ್ಬರು ಸ್ಥಳೀಯ ಯುವಕರು ಬಂದು ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.