ಕಲಬುರಗಿ, ಆ 05 (DaijiworldNews/DB): ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಎಂಟು ಮಂದಿ ಅಭ್ಯರ್ಥಿಗಳನ್ನು ಸಿಐಡಿ ಅಧಿಕಾರಿಗಳ ತಂಡ ಬಂಧಿಸಿದೆ.
ಹೈದರಾಬಾದ್ ಕರ್ನಾಟಕ ಕೋಟಾದಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದ ಜೇವರ್ಗಿಯ ಭಗವಂತರಾಯ ಜೋಗೂರ, ನಾಲ್ಕನೇ ರ್ಯಾಂಕ್ ಪಡೆದಿದ್ದ, ಪ್ರಸ್ತುತ ರಾಯಚೂರು ಜಿಲ್ಲೆ ದೇವದುರ್ಗದಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಆಗಿರುವ ಕಲ್ಲಪ್ಪ ಸಿದ್ದಪ್ಪ ಅಲ್ಲಾಪುರ, ರವಿರಾಜ, ಪೀರಪ್ಪ ಸಿದ್ನಾಳ, ಶ್ರೀಶೈಲ ಹಚ್ಚಡ, ಹೈ-ಕ ಕೋಟಾದಲ್ಲಿ 22ನೇ ರ್ಯಾಂಕ್ ಪಡೆದಿದ್ದ ಅಫಜಲಪುರ ತಾಲ್ಲೂಕಿನ ಗೌರ (ಬಿ) ಗ್ರಾಮದ ಸಿದ್ದುಗೌಡ ಶರಣಪ್ಪ ಪಾಟೀಲ, ಸೋಮನಾಥ, ವಿಜಯಕುಮಾರ್ ಗುಡೂರ ಬಂಧಿತರು. ಈ ಪೈಕಿ ಸಿದ್ದು ಗೌಡ ಎಂಬಾತ ಪ್ರಕರಣದ ಕಿಂಗ್ಪಿನ್ ಆರ್.ಡಿ. ಪಾಟೀಲನ ಪತ್ನಿಯ ಸಹೋದರ ಎನ್ನಲಾಗಿದೆ. ಯಾದಗಿರಿ ಜಿಲ್ಲೆ ಮುದ್ನಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿರುವ ಈತ ಅಕ್ರಮವಾಗಿ ಪರೀಕ್ಷೆ ಬರೆದು ರ್ಯಾಂಕ್ನಲ್ಲಿ ಉತ್ತೀರ್ಣನಾಗಿದ್ದ. ಬಂಧಿತರೆಲ್ಲರೂ ಅಕ್ಟೋಬರ್ 3ರಂದು ನಡೆದ ಪರೀಕ್ಷೆಯಲ್ಲಿ ಕಿಂಗ್ಪಿನ್ ಆರ್.ಡಿ. ಪಾಟೀಲನ ಸಹಕಾರದೊಂದಿಗೆ ಬ್ಲೂ ಟೂತ್ ಬಳಸಿ ಪರೀಕ್ಷೆ ಬರೆದು ಉತ್ತೀರ್ಣಗೊಂಡಿದ್ದರು.
ಬಂಧಿತ ಆರೋಪಿಗಳು ನೀಡಿದ ಮಾಹಿತಿಯಾಧರಿತವಾಗಿ ಈ ಎಂಟು ಮಂದಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಖಚಿತಮಾಹಿತಿ ಲಭಿಸುತ್ತಿದ್ದಂತೆ ಬಂಧಿಸಿದ್ದಾರೆ. ಸಿಐಡಿ ಡಿವೈಎಸ್ಪಿಗಳಾದ ಶಂಕರಗೌಡ ಪಾಟೀಲ, ಪ್ರಕಾಶ ರಾಠೋಡ, ವೀರೇಂದ್ರಕುಮಾರ್ ಹಾಗೂ ಡಿಟೆಕ್ಟಿವ್ ವಿಭಾಗದ ಪಿಎಸ್ಐಗಳಾದ ಆನಂದ, ಯಶವಂತ ಹಾಗೂ ಶಿವಪ್ರಸಾದ್ ನೆಲ್ಲೂರ ಅವರನ್ನೊಳಗೊಂಡ ತಂಡವು ಕಾರ್ಯಾಚರಣೆ ನಡೆಸಿ ಬಂಧಿಸಿದೆ. ನಗರದ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿರುವ ಸಿಐಡಿ ಕ್ಯಾಂಪ್ ಕಚೇರಿಯಲ್ಲಿ ಬಂಧಿತರನ್ನು ವಿಚಾರಣೆ ನಡೆಸಲಾಗುತ್ತಿದೆ.
ರವಿರಾಜ್, ಪೀರಪ್ಪ ಸಿದ್ನಾಳ ಹಾಗೂ ಶ್ರೀಶೈಲ ಹಚ್ಚಡ ಮೂವರೂ ಕಲಬುರಗಿಯ ಶರಣಬಸವೇಶ್ವರ ಕಲಾ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ, ಸಿದ್ದುಗೌಡ ಪಾಟೀಲ ಶರಣಬಸವೇಶ್ವರ ವಿಜ್ಞಾನ ಕಾಲೇಜಿನಲ್ಲಿ ಮತ್ತು ಸೋಮನಾಥ ಗೋದುತಾಯಿ ಎಂಜಿನಿಯರಿಂಗ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ, ಭಗವಂತರಾಯ ಜೋಗೂರ ಹೊಸ ಆರ್ಟಿಒ ಕಚೇರಿ ಬಳಿಯ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ) ಕಾಲೇಜಿನಲ್ಲಿ ಹಾಗೂ ಪಿ. ವಿಜಯಕುಮಾರ್ ಗುಡೂರ ನಗರದ ಎಂ.ಎಸ್. ಇರಾನಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದರು ಎಂದು ವಿಚಾರಣೆ ಸಂದರ್ಭ ತಿಳಿದು ಬಂದಿದೆ.