ರಾಂಚಿ, ಆ 05 (DaijiworldNews/DB): ಸ್ವಂತ ಕೃಷಿ ಭೂಮಿಯಲ್ಲಿ ಉಳುಮೆ ಮಾಡಿದ ಯುವತಿಯೊಬ್ಬಳಿಗೆ ಪಂಚಾಯತ್ ಉಳುಮೆಗೆ ನಿಷೇಧ ಹೇರಿ ದಂಡ ವಿಧಿಸಿದ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ.
ಜಾರ್ಖಂಡ್ನ ಗುಮ್ಲಾ ಜಿಲ್ಲೆಯ ಗ್ರಾಮ ಪಂಚಾಯತ್ ದಾಹು ತೋಲಿ ಉಂಡೆ ಸಿಸೈ ಬ್ಲಾಕ್ ಎಂಬಲ್ಲಿ ಉಳುಮೆಗೆ ನಿಷೇಧ ಹೇರಿದ ಪಂಚಾಯತ್. ಅಲ್ಲದೆ ಆದೇಶ ಧಿಕ್ಕರಿಸಿದರೆ ಗ್ರಾಮದಿಂದ ಬಹಿಷ್ಕಾರ ಹಾಕುವ ಎಚ್ಚರಿಕೆಯನ್ನೂ ಯುವತಿಗೆ ನೀಡಿದೆ.
ಮಹಿಳೆ ಉಳುಮೆ ಮಾಡುವುದರಿಂದ ಆ ಪ್ರದೇಶದಲ್ಲಿ ಸಾಂಕ್ರಾಮಿಕ ಅಥವಾ ಬರ ಬರುತ್ತದೆ. ಇದು ಕೆಟ್ಟ ಶಕುನ ಎಂಬುದಾಗಿ ಸ್ಥಳೀಯರು ಶಂಕಿಸಿ ಪಂಚಾಯತ್ಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಮಂಜು ಓರಾನ್ ಎಂಬ ಯುವತಿಗೆ ಉಳುಮೆ ಮಾಡದಂತೆ ಗ್ರಾಮ ಪಂಚಾಯತ್ ಸೂಚಿಸಿದೆ ಎನ್ನಲಾಗಿದೆ.
ಮಂಜು ಸಂಸ್ಕೃತ ಪದವಿ ಪಡೆಯುತ್ತಿದ್ದು, ಪ್ರಗತಿಪರ ಕೃಷಿಕರಾಗಿಯೂ ಗಮನ ಸೆಳೆದಿದ್ದಾರೆ. ಲಾಕ್ಡೌನ್ ಬಳಿಕ ಹತ್ತು ಎಕರೆ ಜಮೀನಿನಲ್ಲಿ ಆಕೆ ಉಳುಮೆ ಮಾಡುತ್ತಿದ್ದಳು. ಅಲ್ಲದೆ, ತನ್ನ ದುಡಿಮೆಯಿಂದ ಬಂದ ಆದಾಯದಿಂದ ಇತ್ತೀಚೆಗಷ್ಟೇ ಸೆಕೆಂಡ್ ಹ್ಯಾಂಡ್ ಟ್ರ್ಯಾಕ್ಟರ್ ಖರೀದಿಸಿ ಸ್ವಂತ ಬಲದಿಂದ ಉಳುಮೆ ಮಾಡುತ್ತಿದ್ದಳು. ಆದರೆ ಈ ಬಗ್ಗೆ ಪಂಚಾಯತ್ಗೆ ಸ್ಥಳೀಯರು ದೂರು ನೀಡಿದ ಹಿನ್ನೆಲೆಯಲ್ಲಿ ಆಕೆಯನ್ನು ಕರೆಸಿದ ಪಂಚಾಯತ್ ಸದಸ್ಯರು ಉಳುಮೆ ಮಾಡುವುದು ಪುರುಷರಿಗೆ ಸಂಬಂಧಿಸಿದ ಕೆಲಸ. ಮಹಿಳೆ ಉಳುಮೆ ಮಾಡಿದರೆ ಕೆಟ್ಟ ಶಕುನ ಎಂದಿದ್ದಾರೆ. ನಾನು ಎತ್ತುಗಳನ್ನು ಬಳಸದೆ ಯಂತ್ರದ ಮೂಲಕ ಉಳುಮೆ ಮಾಡುತ್ತಿದ್ದು, ಇಲ್ಲಿ ಶಕುನದ ಮಾತು ಬರುವುದಿಲ್ಲ. ಆದರೆ ಇದು ಪಂಚಾಯತ್ ಸದಸ್ಯರಿಗೆ ಮನವರಿಕೆಯಾಗುತ್ತಿಲ್ಲ ಎಂದು ಯುವತಿ ಅಳಲು ತೋಡಿಕೊಂಡಿದ್ದಾರೆ.
ಪಂಚಾಯತ್ ಆದೇಶ ಒಪ್ಪದೆ ಯುವತಿ ಮಂಜು ಸಭೆಯಿಂದ ಹೊರ ನಡೆದಿದ್ದಾರೆ. ಮೂಢನಂಬಿಕೆಯ ಬಗ್ಗೆ ಅವರಿಗೆ ಎಷ್ಟೇ ತಿಳಿ ಹೇಳಲು ಪ್ರಯತ್ನಿಸಿದರೂ ಅವರು ಒಪ್ಪುತ್ತಿಲ್ಲ. ಇನ್ನೂ ಈ ಪ್ರಯತ್ನ ಮಾಡುತ್ತೇನೆ ಎಂದು ಯುವತಿ ಹೇಳಿಕೊಂಡಿದ್ದಾಳೆ. ದೇಶದ ಹಲವಾರು ಭಾಗಗಳಲ್ಲಿ ಮಹಿಳೆಯರು ಉಳುಮೆ ಮಾಡಿ ಕುಟುಂಬದ ಕಾವಲಾಗಿದ್ದಾರೆ ಎಂದು ನಾನು ಅವರಿಗೆ ಹೇಳುತ್ತೇನೆ ಎಂದು ಸಿಸಾಯಿ ಪೊಲೀಸ್ ಠಾಣೆಯ ಅಧಿಕಾರಿ ಆದಿತ್ಯ ಚೌಧರಿ ಹೇಳಿದ್ದಾರೆಂದು ವರದಿಯಾಗಿದೆ.