ಚೆನ್ನೈ, ಆ 05 (DaijiworldNews/DB): ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಕಚನಾಥಂ ಗ್ರಾಮದಲ್ಲಿ 2018ರಲ್ಲಿ ನಡೆದ ಮೂವರು ದಲಿತರ ಹತ್ಯೆ ಪ್ರಕರಣದ 27 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತಮಿಳುನಾಡಿನ ಶಿವಗಂಗಾ ವಿಶೇಷ ನ್ಯಾಯಾಲಯವು ಆದೇಶಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಂಗಾಡು ಗ್ರಾಮದ ಸುಮನ್, ಅರುಣಕುಮಾರ್, ಚಂದ್ರಕುಮಾರ್, ಅಗ್ನಿರಾಜ್, ರಾಜೇಶ್ ಸೇರಿದಂತೆ 33 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಪೈಕಿ ಇಬ್ಬರು ವಿಚಾರಣೆ ಸಂದರ್ಭದಲ್ಲಿ ಮೃತಪಟ್ಟಿದ್ದರು. ಓರ್ವ ಪರಾರಿಯಾಗಿದ್ದು, ಮೂವರು ಬಾಲಕರಾಗಿದ್ದರು. ಹೀಗಾಗಿ 27 ಮಂದಿಯ ವಿಚಾರ ನಡೆಯುತ್ತಿತ್ತುಇದೀಗ ಎಲ್ಲಾ 27 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಏನಿದು ಘಟನೆ?
ಕಚನಾಥಂ ಗ್ರಾಮದಲ್ಲಿ ದೇವಸ್ಥಾನದ ಉತ್ಸವದ ವಿವಾದ ಸಂಬಂಧಿಸಿ ಪರಿಶಿಷ್ಟ ಜಾತಿಗೆ ಸೇರಿದ ಅರುಮುಗಂ (65), ಷಣ್ಮುಗನಾಥನ್ (31) ಮತ್ತು ಚಂದ್ರಶೇಖರನ್ (34) ಅವರನ್ನು ಇನ್ನೊಂದು ಸಮುದಾಯದ ಮಂದಿ 2018 ರಂದು ಮೇ 28ರಂದು ಕೊಲೆಗೈದಿದ್ದರು. ಈ ಘಟನೆಯಿಂದ ಸ್ಥಳದಲ್ಲಿ ಘರ್ಷಣೆಯುಂಟಾಗಿ ಹಲವು ಮಂದಿ ದಲಿತರು ಗಾಯಗೊಂಡಿದ್ದು, ಈ ಪೈಕಿ ತನಶೇಖರನ್ (32) ಎಂಬುವವರು ಘಟನೆ ನಡೆದು ಒಂದೂವರೆ ವರ್ಷದ ಬಳಿಕ ಸಾವನ್ನಪ್ಪಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯವು 27 ಮಂದಿ ಆರೋಪಿಗಳನ್ನು ದೋಷಿಗಳೆಂದು ಘೋಷಿಸಿ ಆಗಸ್ಟ್ 1 ರಂದು ತೀರ್ಪು ನೀಡಿತ್ತು. ಅಲ್ಲದೆ, ಆಗಸ್ಟ್ 3 ರಂದು ಶಿಕ್ಷೆ ಪ್ರಮಾಣ ನಿರ್ಧರಿಸಲಾಗಿದೆ. ಶಿಕ್ಷೆ ಪ್ರಕಟಣೆ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ 27 ಆರೋಪಿಗಳು ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರಾಗಲು ವ್ಯವಸ್ಥೆ ಮಾಡಲಾಗಿತ್ತು. ಶಿವಗಂಗಾ ಪೊಲೀಸ್ ವರಿಷ್ಠಾಧಿಕಾರಿಗಳ ಮನವಿಯ ಮೇರೆಗೆ ಈ ವ್ಯವಸ್ಥೆ ಕಲ್ಪಿಸಲಾಗಿತ್ತು.