ನವದೆಹಲಿ, ಆ 05 (DaijiworldNews/DB): ದೇಶದಲ್ಲಿ ಪ್ರಜಾಪ್ರಭುತ್ವ ಸತ್ತಿದೆ ಎಂದು ಹೇಳುವ ಕಾಂಗ್ರೆಸ್ಸಿಗರು ತಮ್ಮ ಪಕ್ಷದಲ್ಲಿ ಪ್ರಜಾಪ್ರಭುತ್ವ ಇದೆಯೇ ಎಂದು ಹೇಳಬೇಕು. ತನಿಖಾ ಸಂಸ್ಥೆಗಳನ್ನು ಪ್ರತಿಭಟನೆ ಮೂಲಕ ಬೆದರಿಸುವ ನಿಮ್ಮ ಯತ್ನ ಪ್ರಜಾಪ್ರಭುತ್ವವೇ ಎಂದು ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ ಕೇಂದ್ರದ ವಿರುದ್ದ ರಾಹುಲ್ ಗಾಂಧಿ ಕಿಡಿಕಾರಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ರವಿಶಂಕರ್ ಪ್ರಸಾದ್, ಕಾಂಗ್ರೆಸ್ ತನ್ನ ಭ್ರಷ್ಟಾಚಾರಗಳನ್ನು ಮುಚ್ಚಿ ಹಾಕಲು ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ. ಚುನಾವಣಾ ಆಯೋಗ, ಸಿಬಿಐ, ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯಗಳು ಸಂಪೂರ್ಣ ಸ್ವತಂತ್ರವಾಗಿದ್ದು, ನ್ಯಾಯಯುತವಾಗಿ ಕೆಲಸ ನಿರ್ವಹಿಸುತ್ತಿವೆ. ಆದರೆ ಕಾಂಗ್ರೆಸ್ ಪ್ರತಿಭಟನೆ ಮೂಲಕ ತನಿಖಾ ಸಂಸ್ಥೆಗಳನ್ನು ಬೆದರಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಎಂದರೆ ಸೋನಿಯಾ, ರಾಹುಲ್, ಪ್ರಿಯಾಂಕಾ ಎಂದಾಗಿದೆ. ಹಿರಿಯ ನಾಯಕರನ್ನು ಪ್ರಜಾಪ್ರಭುತ್ವದ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿಲ್ಲ. ಅದಕ್ಕಾಗಿಯೇ ಆ ಪಕ್ಷವನ್ನು ಪದೇಪದೇ ಜನ ತಿರಸ್ಕರಿಸುತ್ತಿದ್ದಾರೆ. ತಮ್ಮ ಭ್ರಷ್ಟಾಚಾರಗಳನ್ನು ಮರೆ ಮಾಚಲು ಆಗಾಗ ಕಾಂಗ್ರೆಸ್ ತನಿಖಾ ಸಂಸ್ಥೆಗಳ ದುರ್ಬಳಕೆಯಾಗುತ್ತಿದೆ ಎನ್ನಲು ಕಾರಣ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ತಪ್ಪೇ ಮಾಡಿಲ್ಲ ಎಂದಾದರೆ ಅವರು ವಿಚಾರಣೆಗೆ ಹೆದರುವುದು ಯಾಕೆ ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ದೇಶ ವಿದೇಶ ಸುತ್ತುತ್ತಾರೆ, ಆ ಮೂಲಕ ಪ್ರಶ್ನೆಗಳಿಗೆ ಉತ್ತರಿಸುತ್ತಾರೆಯೇ ಹೊರತು ಹೆದರುವುದಿಲ್ಲ. ಅವರಿಗೆ ಜಾಗತಿಕ ಮನ್ನಣೆಯಿದೆ ಎಂದವರು ಇದೇ ವೇಳೆ ತಿಳಿಸಿದರು.