ಬೆಂಗಳೂರು, ಆ 05 (DaijiworldNews/MS): ಇಂದು ರಾಜ್ಯಾದ್ಯಂತ ವರ ಮಹಾಲಕ್ಷ್ಮೀ ಹಬ್ಬದ ಸಂಭ್ರಮ ಮನೆ ಮಾಡಿದೆ. ಈ ಸಂದರ್ಭದಲ್ಲಿ ಬೆಲೆ ಏರಿಕೆ ವಿಚಾರವಾಗಿ ಕಾಂಗ್ರೆಸ್ ಪಕ್ಷವು ಬಿಜೆಪಿ ವಿರುದ್ಧ ಟೀಕೆ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿದ ಕರ್ನಾಟಕ ಕಾಂಗ್ರೆಸ್, ಇಂದು ವರಮಹಾಲಕ್ಷ್ಮಿ ಹಬ್ಬ, ಜನತೆ ಲಕ್ಷ್ಮಿಯನ್ನು ಆರಾಧಿಸಲೂ ದುಬಾರಿ ಹಣ ತೆರಬೇಕಾಗಿದೆ.
ಬಿಜೆಪಿ ಆಡಳಿತದ ಭಾರತದಲ್ಲಿ 'ಲಕ್ಷ್ಮಿ ತಾಯಿ' ಸಂಕಷ್ಟ ಎದುರಿಸುತ್ತಿದ್ದಾಳೆ. ನಿರಂತರ ಬೆಲೆ ಏರಿಕೆಯಿಂದಾದ ದುಬಾರಿ ದುನಿಯಾದಲ್ಲಿ ಜನರ ಕೈಯ್ಯಲ್ಲಿ ಲಕ್ಷ್ಮಿ ನಿಲ್ಲುತ್ತಿಲ್ಲ. ಸರ್ಕಾರದ ಸಂವೇದನಾ ಶೂನ್ಯತೆಯೇ ಇದಕ್ಕೆ ಕಾರಣ ಎಂದು ಟೀಕಿಸಿದೆ.
ಇನ್ನು ರಾಷ್ಟ್ರ ರಾಜಧಾನಿಯಲ್ಲಿ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಆಯೋಜಿಸಿದೆ. ಹೆಚ್ಚುತ್ತಿರುವ ಬೆಲೆ, ನಿರುದ್ಯೋಗ ಮತ್ತು ಜಿಎಸ್ಟಿ ಏರಿಕೆ ವಿರುದ್ಧ ಕೇಂದ್ರ ಸರ್ಕಾರದ ವಿರುದ್ಧ ಶುಕ್ರವಾರ ದೆಹಲಿಯಾದ್ಯಂತ ಸದ್ದು ಮೂಡಿಸಲು ಕಾಂಗ್ರೆಸ್ ಮುಂದಾಗಿದೆ.