ಮುಂಬೈ, ಆ 05 (DaijiworldNews/DB): ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಶೇ. 0.50ರಷ್ಟು ಹೆಚ್ಚಳ ಮಾಡಿದ್ದು, ಪ್ರಸ್ತುತ ರೆಪೋ ದರ ಶೇ. 5.4 ಆಗಿದೆ. ಇದು ತತ್ಕ್ಷಣದಿಂದಲೇ ಅನ್ವಯವಾಗುವಂತೆ ಜಾರಿಗೆ ಬರಲಿದೆ.
ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಇದನ್ನು ಪ್ರಕಟಿಸಿದರು. ಹೆಚ್ಚಳವಾದ ರೆಪೋ ದರ ತತ್ಕ್ಷಣದಿಂದಲೇ ಅನ್ವಯವಾಗುವಂತೆ ಜಾರಿಗೆ ಬರಲಿದೆ ಎಂದರು.
ರೆಪೋ ದರ ಹೆಚ್ಚಳ ಮಾಡಿದ ಬಳಿಕ ಈ ದರವು ಕೊರೊನಾಪೂರ್ವ ಹಂತಕ್ಕೆ ತಲುಪಿದೆ. ಅಂದರೆ 2019ರ ಮಟ್ಟದ ರೆಪೊ ದರ ಆಗಿದೆ. ರೆಪೊ ದರ ಹೆಚ್ಚಳದ ಮೂಲಕ ಎಲ್ಲಾ ಬ್ಯಾಂಕ್ಗಳಲ್ಲಿ ಬಡ್ಡಿ ದರ ಹೆಚ್ಚಾಗಲಿದೆ. ಈ ರೆಪೊ ದರ ಹೆಚ್ಚಳವು ಹಣಕಾಸು ನಿರ್ವಹಣಾ ಸಮಿತಿಯ ತೀರ್ಮಾನವಾಗಿದೆ.
ದೇಶದಲ್ಲಿ ಕೊರೊನಾ ಏರುಗತಿಯಲ್ಲಿ ಸಾಗಿದ್ದ ವೇಳೆ ಆರ್ಥಿಕತೆ ಕುಸಿದಿತ್ತು. ಹೀಗಾಗಿ ಜನರಿಗೆ ಸುಲಭವಾಗಿ ಬ್ಯಾಂಕ್ ಸಾಲ ಸಿಗುವಂತೆ ಮಾಡಲು ಮಾರ್ಚ್ 2020ರಲ್ಲಿ ರೆಪೋ ದರಗಳನ್ನು ಆರ್ಬಿಐ ಗಣನೀಯ ಪ್ರಮಾಣದಲ್ಲಿ ಇಳಿಕೆ ಮಾಡಿತ್ತು.
ಆದರೆ ಇದೀಗ ಕೊರೊನಾದಿಂದ ದೇಶ ಚೇತರಿಸಿಕೊಳ್ಳುತ್ತಿದ್ದು, ಆರ್ಥಿಕತೆಯೂ ಸಹಜ ಸ್ಥಿತಿಯತ್ತ ಮರಳುತ್ತಿದೆ. ಚೀನಾದ ಆರ್ಥಿಕ ಸಂಕಷ್ಟ, ರಷ್ಯಾ-ಉಕ್ರೇನ್ ಯುದ್ದದ ಪರಿಣಾಮ ಭಾರತದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣದ ಒತ್ತಡದಲ್ಲಿ ಆರ್ಬಿಐ ಇದೆ. ಇದಕ್ಕಾಗಿ ಹಣಕಾಸಿನ ಹರಿವು ನಿರ್ಬಂಧಿಸಿ ಮಾರುಕಟ್ಟೆಯಲ್ಲಿ ನಗದು ಚಲಾವಣೆಗೆ ಕಡಿವಾಣ ಹಾಕುವ ಉದ್ದೇಶಕ್ಕೆ ಮುಂದಾಗಿದೆ. ಹೀಗಾಗಿ ರೆಪೋ ದರವನ್ನು ಏರಿಕೆ ಮಾಡುತ್ತಿದೆ.
ರೆಪೋ ದರವನ್ನು ಆರ್ಬಿಐ ಹೆಚ್ಚಳ ಮಾಡುತ್ತಿರುವುದು ಇದು ಮೂರನೇ ಬಾರಿಯಾಗಿದೆ. ಹಣದುಬ್ಬರ ನಿಯಂತ್ರಣದ ಸಲುವಾಗಿ ಪ್ರಮುಖ ನಿರ್ಧಾರ ಕೈಗೊಂಡಿರುವ ಆರ್ಬಿಐ ಕಳೆದ ಮೇಯಲ್ಲಿ ಶೇ. 0.40 ಮತ್ತು ಜೂನ್ನಲ್ಲಿ ಶೇ. 0.50 ರೆಪೋ ದರ ಹೆಚ್ಚಿಸಿತ್ತು.