ನವದೆಹಲಿ, ಆ 05 (DaijiworldNews/MS): ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಆಯೋಜಿಸಿದ್ದು ಇದರ ಅಂಗವಾಗಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಪ್ಪು ಕುರ್ತಾ ಮತ್ತು ಕಪ್ಪು ಪೇಟ ಧರಿಸಿ ಸಂಸತ್ತಿನಲ್ಲಿ ಕಾಣಿಸಿಕೊಂಡಿದ್ದು, ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ.
ಇತ್ತೀಚೆಗೆ ಸಂಸತ್ ಉಭಯ ಕಲಾಪಗಳಲ್ಲಿ ಪ್ರತಿಪಕ್ಷದ ಸಂಸದರನ್ನು ಅಮಾನತುಗೊಳಿಸಿದ ಕ್ರಮವನ್ನು ವಿರೋಧಿಸಿ ಗ ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್ ಸಂಸದರು ಪ್ರತಿಭಟನೆ ನಡೆಸಿದಾಗ ಅಲ್ಲಿಯು ಮಲ್ಲಿಕಾರ್ಜುನ ಖರ್ಗೆ ಕಪ್ಪು ಪೇಟ ಸುತ್ತಿಕೊಂಡು ಗಮನ ಸೆಳೆದಿದ್ದರು. ಇದೀಗ ಮತ್ತೊಮ್ಮೆ ಕಪ್ಪು ವಸ್ತ್ರ ಧರಿಸಿ ಕೇಂದ್ರದ ವಿರುದ್ದ ಪ್ರತಿಭಟನೆಯಲ್ಲಿ ಗಮನಸೆಳೆದಿದ್ದಾರೆ.
ಹೆಚ್ಚುತ್ತಿರುವ ಬೆಲೆ, ನಿರುದ್ಯೋಗ ಮತ್ತು ಜಿಎಸ್ಟಿ ಏರಿಕೆ ವಿರುದ್ಧ ಕೇಂದ್ರ ಸರ್ಕಾರದ ವಿರುದ್ಧಕಾಂಗ್ರೆಸ್ ಬೃಹತ್ ಪ್ರತಿಭಟನೆ ಆಯೋಜಿಸಿದೆ . ಇದರ ಭಾಗವಾಗಿ ಭಾಗವಾಗಿ 'ಪ್ರಧಾನಿ ನಿವಾಸಕ್ಕೆ ಮುತ್ತಿಗೆ' ಹಾಕುವುದು ಮತ್ತು ಸಂಸತ್ನಿಂದ 'ಚಲೋ ರಾಷ್ಟ್ರಪತಿ ಭವನ್' ಮೆರವಣಿಗೆ ಆಯೋಜಿಸಲಾಗಿದೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸದಸ್ಯರು ಮತ್ತು ಹಿರಿಯ ನಾಯಕರು ಪ್ರಧಾನಿ ನರೇಂದ್ರ ಮೋದಿ ನಿವಾಸಕ್ಕೆ ಮುತ್ತಿಗೆ ಹಾಕಲಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭೆ ಸಂಸದರು ರಾಷ್ಟ್ರಪತಿ ಭವನದವರೆಗೆ ಮೆರವಣಿಗೆ ತೆರಳಲಿದ್ದಾರೆ.