ಬಲರಾಮಪುರ, ಆ 05 (DaijiworldNews/DB): ಹಾವು ಕಡಿತದಿಂದ ಸಾವನ್ನಪ್ಪಿದ ಸಹೋದರನ ಅಂತ್ಯಕ್ರಿಯೆಗೆ ಬಂದಿದ್ದ ವ್ಯಕ್ತಿಯೂ ಹಾವು ಕಡಿತಕ್ಕೊಳಗಾಗಿ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಬಲರಾಮಪುರದಲ್ಲಿ ನಡೆದಿದೆ.
ಅರವಿಂದ್ ಮಿಶ್ರಾ (38) ಎಂಬವರು ಹಾವು ಕಡಿತಕ್ಕೊಳಗಾಗಿ ಮೃತಪಟ್ಟಿದ್ದರು. ಇವರ ಅಂತ್ಯಕ್ರಿಯೆಗಾಗಿ ಅವರ ತಮ್ಮ ಗೋವಿಂದ ಮಿಶ್ರಾ (22) ಲುಧಿಯಾನದಿಂದ ಬುಧವಾರ ಭವಾನಿಪುರಕ್ಕೆ ಆಗಮಿಸಿದ್ದರು. ಆದರೆ ಅಣ್ಣನ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿ ರಾತ್ರಿ ಮನೆಯಲ್ಲಿ ಮಲಗಿದ್ದಾಗ ಅವರಿಗೂ ಹಾವು ಕಡಿದಿದೆ. ಹಾವು ಕಡಿತಕ್ಕೊಳಗಾದ ಗೋವಿಂದ ಮೃತಪಟ್ಟರೆ, ಅವರ ಜೊತೆಗೇ ಮಲಗಿದ್ದ ಸಂಬಂಧಿ ಚಂದ್ರಶೇಖರ್ ಪಾಂಡೆ (22) ಅವರಿಗೂ ಹಾವು ಕಚ್ಚಿದ್ದು, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಎಂದು ಸರ್ಕಲ್ ಇನ್ಸ್ಪೆಕ್ಟರ್ ರಾಧಾ ರಮಣ್ ಸಿಂಹ್ ತಿಳಿಸಿರುವುದಾಗಿ ವರದಿಯಾಗಿದೆ.
ಹಿರಿಯ ವೈದ್ಯಕೀಯ ಮತ್ತು ಆಡಳಿತ ಅಧಿಕಾರಿಗಳು ಗುರುವಾರ ಗ್ರಾಮಕ್ಕೆ ಭೇಟಿ ನೀಡಿದರು. ಸ್ಥಳೀಯ ಶಾಸಕ ಕೈಲಾಶ್ ನಾಥ್ ಶುಕ್ಲಾ ಅವರು ಕುಟುಂಬಕ್ಕೆ ಸಾಂತ್ವನ ಹೇಳಿ ಸಹಾಯದ ಭರವಸೆ ನೀಡಿದ್ದಾರೆ.