ನಾಗಪಟ್ಟಣಂ, ಆ 05 (DaijiworldNews/MS): ಇತ್ತೀಚೆಗಷ್ಟೇ ತಮಿಳುನಾಡಿನ ಸೌಂದರ್ಯ ಸ್ಪರ್ಧೆಯಲ್ಲಿ ವಿಜಯ್ ಅಭಿನಯದ ತೇರಿ ಚಿತ್ರದ ಹಿನ್ನೆಲೆ ಸಂಗೀತಕ್ಕೆ ರ್ಯಾಂಪ್ ವಾಕ್ ಮಾಡಿದ್ದ ಐವರು ಪೊಲೀಸರನ್ನು ವರ್ಗಾವಣೆ ಮಾಡಿ ನಾಗಪಟ್ಟಣಂ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಕಳೆದ ಭಾನುವಾರ ಮೈಲಾಡುತುರೈ ಜಿಲ್ಲೆಯ ಸೆಂಬನಾರ್ಕೋವಿಲ್ನಲ್ಲಿ ಖಾಸಗಿ ಸಂಸ್ಥೆಯೊಂದು ಸೌಂದರ್ಯ ಸ್ಪರ್ಧೆಯನ್ನು ಆಯೋಜಿಸಿತ್ತು. ಇದರಲ್ಲಿ ನಟಿ ಯಶಿಕಾ ಆನಂದ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಸ್ಪರ್ಧೆಗಳನ್ನು ಉದ್ಘಾಟಿಸಿದ್ದರು.
ಕಾರ್ಯಕ್ರಮದ ವೇಳೆ ಭದ್ರತಾ ಕರ್ತವ್ಯದಲ್ಲಿದ್ದ ಪೊಲೀಸರನ್ನು ಸಹ ಸ್ಪರ್ಧಿಗಳು, ಪ್ರೇಕ್ಷಕರು ಮತ್ತು ಉತ್ಸವದ ಆಯೋಜಕರು ವೇದಿಕೆಗೆ ಬರುವಂತೆ ಒತ್ತಾಯಿಸಿದರು.
ಅವರ ಒತ್ತಾಯಕ್ಕೆ ಮಣಿದು ಪೊಲೀಸರೂ ಈ ಸೌಂದರ್ಯ ಸ್ಪರ್ಧೆಯಲ್ಲಿ ಹೆಜ್ಜೆಹಾಕಿದ್ದರು. ಈ ವೇಳೆ ನಟ ವಿಜಯ್ ಅವರ ತೇರಿ ಚಿತ್ರದ ‘ವೆಂಡಂ ತೆರಿಕ್ಕ ತೇರಿಕ್ಕ ಲಂಗನ್’ ಹಾಡನ್ನು ಹಿನ್ನೆಲೆ ಸಂಗೀತವಾಗಿ ನುಡಿಸಲಾಗಿತ್ತು. ಪೊಲೀಸರು ಕೂಡ ಗೌರವಯುತವಾಗಿ ರ್ಯಾಂಪ್ ವಾಕ್ ಮಾಡಿದ್ದರು.
ಭದ್ರತಾ ಕರ್ತವ್ಯದಲ್ಲಿರುವ ಪೊಲೀಸರು ರ್ಯಾಂಪ್ ವಾಕ್ ಮಾಡಿದ್ದು ಕಟು ಟೀಕೆಗೆ ಗುರಿಯಾಯಿತು. ಪೊಲೀಸರು ನಡೆಸಿದ ರ್ಯಾಂಪ್ ವಾಕ್ನ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಟೀಕೆ ಕೇಳಿಬಂದಿತ್ತು.
ಈ ಹಿನ್ನಲೆ ನಾಗಪಟ್ಟಣಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜವಗರ್ ಅವರು ಪ್ರಸ್ತುತ ಸೆಂಬನಾರ್ಕೋವಿಲ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶೇಷ ಸಹಾಯಕ ಇನ್ಸ್ಪೆಕ್ಟರ್ ಸುಬ್ರಮಣಿಯನ್ ಸೇರಿದಂತೆ ರೇಣುಕಾ, ಅಶ್ವಿನಿ, ನಿತ್ಯಶೀಲಾ ಮತ್ತು ಶಿವನೇಸನ್ ಎಂಬವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.