ಕೊಡಗು, ಆ 05 (DaijiworldNews/HR): ಆಗಸ್ಟ್ 1ರಿಂದಲೂ ಕೊಡಗು ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಭಾಗಮಂಡಲ, ಕರಿಕೆ ರಸ್ತೆಯಲ್ಲಿ ಹಾಗೂ ಸಂಪಾಜೆ ಸಮೀಪದ ಕಲ್ಲಾಳ ಭೂಕುಸಿತವಾಗಿದೆ.
ಭಾರೀ ಮಳೆಯಿಂದಾಗಿ ನೀರು ರಭಸವಾಗಿ ಹರಿಯುತ್ತಿದ್ದು, ಚೆಟ್ಟಿಮಾನಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕೊಚ್ಚಿ ಹೋಗಿದೆ. ಸೇತುವೆಯ ಎರಡು ಭಾಗಗಳಲ್ಲಿನ ಮಣ್ಣು ಸಂಪೂರ್ಣ ಕೊಚ್ಚಿ ಹೋಗಿರುವುದರಿಂದ ಚೆಟ್ಟಿಮಾನಿಯ 60 ಕುಟುಂಬಗಳ ಜನರು ಸುಮಾರು 13 ಕಿಲೋ ಮೀಟರ್ ನಡೆದುಕೊಂಡು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಇನ್ನು ಮಡಿಕೇರಿ ತಾಲೂಕಿನ ಸಂಪಾಜೆ, ಚೆಂಬು, ಕರಿಕೆ, ಕೊಯನಾಡು ಭಾಗದಲ್ಲಿ ಮೂಲ ಸೌಕರ್ಯಕ್ಕೆ ಹಾನಿಯಾಗಿದ್ದು, ಚೆಂಬು, ಗೂನಡ್ಕ ದಬ್ಬಡ್ಕದಲ್ಲಿನ ಹೊಳೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ 8.30 ರವರೆಗೆ 115.6 ಮಿಲಿ ಮೀಟರ್ ನಿಂದ 204 ಮಿಲಿ ಮೀಟರ್ ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.