ಕಾರವಾರ, ಆ 04 (DaijiworldNews/SM) ರಾಜ್ಯದಲ್ಲಿ ಮಳೆಯಿಂದಾಗಿ ಅಪಾರ ಹಾನಿಯಾಗಿದ್ದು, ಹಾನಿಗೀಡಾದ ಪ್ರದೇಶಗಳಲ್ಲಿ ತುರ್ತು ಪರಿಹಾರ ಕಾರ್ಯಗಳಿಗೆ ತಕ್ಷಣವೇ 500 ಕೋಟಿ ರು.ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಭಟ್ಕಳ ತಾಲೂಕಿನ ಮುಟ್ಟಳ್ಳಿ ಗ್ರಾಮದಲ್ಲಿ ಭೂ ಕುಸಿತದಿಂದ ನಾಲ್ವರು ಮೃತಪಟ್ಟ ಪ್ರದೇಶಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭೇಟಿ ನೀಡಿದ್ದರು. ಆ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಈ ವಿಚಾರ ತಿಳಿಸಿದ್ದಾರೆ.
ರಾಜ್ಯದಲ್ಲಿ 14 ಜಿಲ್ಲೆಗಳ 115 ಹಳ್ಳಿಗಳಲ್ಲಿ ಭಾರಿ ಮಳೆಯಿಂದಾಗಿ ನೆರೆ ಹಾನಿ ಸಂಭವಿಸಿದೆ. ಬುಧವಾರ ಮತ್ತೆ ತುಮಕೂರಿನಲ್ಲಿ ನಾಲ್ಕು ಜನ ಹಾಗೂ ವಿಜಯನಗರದಲ್ಲಿ ಓರ್ವ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 600 ಮನೆಗಳು ಸಂಪೂರ್ಣ, 2 ಸಾವಿರಕ್ಕೂ ಹೆಚ್ಚು ಮನೆಗಳು ತೀವ್ರತರ ಹಾಗೂ 14 ಸಾವಿರಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಯಾಗಿದೆ. ಎಲ್ಲದಕ್ಕೂ ಕೂಡ ಅನುದಾನ ಬಿಡುಗಡೆ ಮಾಡಲು ಈಗಾಗಲೇ ಸೂಚಿಸಲಾಗಿದೆ. 21,431 ಹೆಕ್ಟೇರ್ ಪ್ರದೇಶ ಬೆಳೆ ನಾಶವಾಗಿದ್ದು, ಇದು ಇನ್ನೂ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಜಂಟಿ ಸಮೀಕ್ಷೆ ಮಾಡಬೇಕಾಗಿರುವುದರಿಂದ ವರದಿ ಬಂದ ತಕ್ಷಣ ಪರಿಹಾರ ವಿತರಿಸಲಾಗುವುದು ಎಂದರು.
ಇನ್ನು ಭಟ್ಕಳದಲ್ಲಿಯೂ ಭಾರಿ ಮಳೆಯಿಂದಾಗಿ ಮನೆಗಳಿಗೆ, ಅಂಗಡಿಗಳಿಗೆ ಹಾಗೂ ಬೋಟ್ ಗಳಿಗೆ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ. ಸುಮಾರು 40 ಕೋಟಿ ರೂ ಹಾನಿಯಾಗಿರುವ ಬಗ್ಗೆ ಸದ್ಯ ಅಂದಾಜಿಸಲಾಗಿದೆ. ಇದು ಇನ್ನೂ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಎಷ್ಟೇ ಹಾನಿಯಾದರೂ ಮನೆ, ಅಂಗಡಿ ಸೇರಿದಂತಡ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಸರ್ಕಾರ ಕೂಡಲೇ ಪರಿಹಾರ ಒದಗಿಸಲು ಸಿದ್ಧವಿದೆ ಎಂದಿದ್ದಾರೆ.
ಕಂದಾಯ ಸಚಿವ ಆರ್.ಅಶೋಕ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಭಟ್ಕಳ ಶಾಸಕ ಸುನೀಲ್ ನಾಯ್ಕ್, ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರೊಂದಿಗೆ ಆಗಮಿಸಿದ ಸಿಎಂ ಗ್ರಾಮದ ಪರಿಸ್ಥಿತಿ ಹಾಗೂ ಭೂಕುಸಿತಕ್ಕೆ ಕಾರಣಗಳ ಕುರಿತು ಮಾಹಿತಿ ಪಡೆದರು. ಬೊಮ್ಮಾಯಿ ಅವರು ಭೂಕುಸಿತದಿಂದ ಸಾವನ್ನಪ್ಪಿದ ಸಂತ್ರಸ್ತರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ 29 ಲಕ್ಷ ರೂ.ಗಳ ಚೆಕ್ ಅನ್ನು ಮೃತರ ಸಂಬಂಧಿಕರಿಗೆ ಹಸ್ತಾಂತರಿಸಿದರು.
ಭಾರೀ ಮಳೆಗೆ ವಿಂಧ್ಯಗಿರಿ ದೇಗುಲದ ಗೋಮಟೇಶ್ವರ ಮೂರ್ತಿಯ ಗೋಡೆ ಕುಸಿದು ಬಿದ್ದಿರುವ ಬಗ್ಗೆ ವರದಿಯಾಗಿದೆ. ಮದ್ದೂರು ಕೆರೆ ಒಡೆದ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಎರಡನೇ ದಿನವೂ ಸಂಚಾರ ಸ್ಥಗಿತಗೊಂಡಿದೆ.