ಮಂಡ್ಯ, ಆ 04 (DaijiworldNews/DB): ರಾಜ್ಯದಲ್ಲಿ ಕಳೆದೆರಡು ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ 64 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 14 ಜಿಲ್ಲೆಗಳ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಮಂಡ್ಯದಲ್ಲಿ ಮಳೆ ಅವಾಂತರ ಹಿನ್ನೆಲೆಯಲ್ಲಿ ಕೆ.ಆರ್. ಪೇಟೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್ 1ರಿಂದ ಆಗಸ್ಟ್ 4ರವರೆಗೆ ಭಾರೀ ಮಳೆಯಿಂದಾಗಿ ರಾಜ್ಯದಲ್ಲಿ ಪ್ರಾಣ ಹಾನಿ, ಆಸ್ತಿಹಾನಿ ಸಾಕಷ್ಟು ಪ್ರಮಾಣದಲ್ಲಿ ಆಗಿದೆ. 608 ಮನೆ, 299 ರಸ್ತೆ, 4,224 ಶಾಲೆಗಳಿಗೆ ಹಾನಿಯಾಗಿದೆ. 64 ಮಂದಿ ಸಾವನ್ನಪ್ಪಿದ್ದು, 1,4,956 ಮಂದಿ ಪ್ರವಾಹ ಪೀಡಿತರಾಗಿದ್ದಾರೆ ಎಂದು ಮಾಹಿತಿ ನೀಡಿದರು.
2,450 ಮನೆಗಳು ಭಾಗಶಃ ಹಾನಿಗೊಂಡಿವೆ. ನೆರೆಯಲ್ಲಿ ಸಿಲುಕಿದ್ದ 8,057 ಮಂದಿಯನ್ನು ರಕ್ಷಿಸಲಾಗಿದ್ದು, 6933 ಮಂದಿ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ ಎಂದರು.
ಮಳೆ ಕೃಷಿಗೂ ತೀವ್ರ ಸಂಕಷ್ಟ ತಂದೊಡ್ಡಿದೆ. 1,8,280 ಹೆಕ್ಟೇರ್ ಬೆಳೆ ನಾಶವಾದರೆ, 4,500 ಹೆಕ್ಟೇರ್ ತೋಟಗಾರಿಕೆ ಬೆಳೆ ನಾಶವಾಗಿದೆ. 61 ಕೆರೆಗಳು, 299 ಸೇತುವೆಗಳು ಹಾನಿಗೊಳಗಾಗಿವೆ ಎಂದು ತಿಳಿಸಿದರು.