ಬೆಂಗಳೂರು, ಆ 04 (DaijiworldNews/DB): ಜನರನ್ನು ನಂಬಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಕೈ ಎತ್ತುತ್ತಿದ್ದಾರೆ. ಯಾರು ಯಾರಿಗೆ ಕೈ ಎತ್ತುತ್ತಾರೆ, ಯಾರು ಯಾರ ಬೆನ್ನಿಗೆ ಚೂರಿ ಹಾಕುತ್ತಾರೆಂಬುದನ್ನು ಮುಂದಿನ ದಿನಗಳಲ್ಲಿ ನೋಡೋಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಒಗ್ಗಟ್ಟು ಪ್ರದರ್ಶನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹಿಂದೊಂದು ದಿನ ನನಗೂ ಕೈ ಕೈ ಹಿಡಿದುಕೊಂಡು ಕೈ ಎತ್ತಿದ್ದರು. ಆದರೆ ಬಳಿಕ ಅವರನ್ನು ನಂಬಿದಕ್ಕೆ ನನ್ನ ಬೆನ್ನಿಗೆ ಚೂರಿ ಹಾಕಿದರು. ಈಗ ಜನರನ್ನು ನಂಬಿಸಲು ಇಬ್ಬರೂ ಕೈ ಎತ್ತುತ್ತಿದ್ದಾರೆ ಎಂದರು.
ಸಂದರ್ಭಕ್ಕೆ ತಕ್ಕಂತೆ ಕೈ ಎತ್ತುವುದು, ಇಳಿಸುವುದು ನಡೆಯುತ್ತಿರುತ್ತದೆ. ಮುಂದಿನ ದಿನಗಳಲ್ಲಿ ಯಾರು ಯಾರಿಗೆ ಕೈ ಎತ್ತುತ್ತಾರೆ, ಯಾರು ಯಾರ ಬೆನ್ನಿಗೆ ಚೂರಿ ಹಾಕುತ್ತಾರೆಂಬುದನ್ನು ನೋಡೋಣ ಎಂದು ಮಾರ್ಮಿಕವಾಗಿ ಹೇಳಿದರು.