ಕೊಪ್ಪಳ, ಆ 04 (DaijiworldNews/DB): ಹೆತ್ತ ತಾಯಿಯನ್ನು ಸಾಕಲಾಗದ ಮಗನೊಬ್ಬ ತಾಯಿಯನ್ನು ದೇವಸ್ಥಾನದಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ಕೊಪ್ಪಳದಲ್ಲಿ ನಡೆದಿದೆ. ಮಗನ ದಾರಿ ಕಾದ ವೃದ್ದ ತಾಯಿ ಕಂಗಾಲಾಗಿದ್ದಾಳೆ.
ಕಾಸೀಂಬಿ ಎಂಬ 80 ವರ್ಷ ವಯಸ್ಸಿನ ವೃದ್ಧೆಯನ್ನು ಆಕೆಯ ಮಗ ಕೊಪ್ಪಳ ಜಿಲ್ಲೆಯ ಹುಲಗಿ ಗ್ರಾಮದ ಹುಲಿಗೆಮ್ಮ ದೇಗುಲದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಸಿಮ್ ಇಲ್ಲದ ಖಾಲಿ ಮೊಬೈಲ್ ಹಾಗೂ ನಂಬರ್ ಇದೆ ಎಂದು ಖಾಲಿ ಹಾಳೆ ನೀಡಿ ಈಗ ಬರುತ್ತೇನೆಂದು ಹೋಗಿದ್ದಾನೆ. ಆದರೆ ಈ ವಿಷಯ ವೃದ್ದೆಗೆ ತಿಳಿಯದೆ ಮಗನಿಗಾಗಿ ಕಾದು ಕಾದು ಕಂಗಾಲಾಗಿದ್ದಾರೆ. ಎರಡು ದಿನಗಳಿಂದ ಪುತ್ರನ ಸುಳಿವಿಲ್ಲದೆ ದೇವಳದಲ್ಲೇ ವೃದ್ದೆ ದಿನಗಳೆದಿದ್ದಾಳೆ. ರಾತ್ರಿಯಾದರೂ ಅಜ್ಜಿಯನ್ನು ಕರೆದೊಯ್ಯಲು ಯಾರೂ ಬಾರದಿರುವುದನ್ನು ಕಂಡ ಸ್ಥಳೀಯರು ಆಕೆಗೆ ತಿನ್ನಲು ಆಹಾರ, ಮಲಗಲು ಹಾಸಿಗೆ, ದಿಂಬು ನೀಡಿದ್ದಾರೆ. ಬಳಿಕ ಮೊಬೈಲ್ ಪರಿಶೀಲಿಸಿದಾಗ ಅದರಲ್ಲಿ ಸಿಮ್ ಇಲ್ಲದಿರುವುದು ಗೊತ್ತಾಗಿದೆ. ಅಲ್ಲದೆ ಮೊಬೈಲ್ ನಂಬರ್ ಇದೆ ಎಂದು ಖಾಲಿ ಹಾಳೆ ನೀಡಿರುವುದೂ ಗೊತ್ತಾಗಿದೆ. ಆಕೆಯಲ್ಲಿ ವಿಚಾರಿಸಿದಾಗ ಊರು ಉಜ್ಜಯಿನಿ ಹಾಗೂ ಹೆಸರು ಕಾಸೀಂಬಿ ಎಂದು ಹೇಳಿಕೊಂಡಿದ್ದಾಳೆ. ಇದಿಷ್ಟು ಬಿಟ್ಟರೆ ಆಕೆಗೆ ಬೇರೆ ಯಾವುದೇ ಮಾಹಿತಿ ಇಲ್ಲ.
ಬಳಿಕ ಸ್ಥಳೀಯರು ಸೇರಿ ಹಿರಿಯ ನಾಗರಿಕ ಇಲಾಖೆ ಸಿಬಂದಿಗೆ ವಿಷಯ ತಿಳಿಸಿದ್ದು, ಇಲಾಖೆ ಸಿಬಂದಿ ಸ್ಥಳಕ್ಕಾಗಮಿಸಿ ಅಜ್ಜಿಯನ್ನು ವಿಚಾರಿಸಿ ಬಳಿಕ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಆನಂತರ ವೃದ್ದೆಯನ್ನು ವೃದ್ದಾಶ್ರಮಕ್ಕೆ ಸೇರಿಸಲಾಯಿತು.