ನವದೆಹಲಿ, ಆ 04 (DaijiworldNews/DB): ಹೆರಾಲ್ಡ್ ಹೌಸ್ನ ಒಂದು ಭಾಗಕ್ಕೆ ಬೀಗ ಮುದ್ರೆ ಹಾಕಿರುವ ಜಾರಿ ನಿರ್ದೇಶನಾಲಯವು ಕಾಂಗ್ರೆಸ್ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಶಾಕ್ ನೀಡಿದೆ. ಯಂಗ್ ಇಂಡಿಯನ್ ಹಣ ವರ್ಗಾವಣೆ ಪ್ರಕರಣದ ತನಿಖೆ ಸಂದರ್ಭದಲ್ಲಿ ಹಾಜರಿರುವಂತೆ ಖರ್ಗೆಗೆ ಇಡಿ ಸಮನ್ಸ್ ಜಾರಿ ಮಾಡಿದೆ.
ಹೆರಾಲ್ಡ್ ಹೌಸ್ನ 4ನೇ ಮಹಡಿಯಲ್ಲಿ ಯಂಗ್ ಇಂಡಿಯನ್ ಪ್ರಕಾಶನ ಸಂಸ್ಥೆಯ ಕಚೇರಿ ಇದ್ದು, ಇಲ್ಲಿನ ಪ್ರತಿ ವಹಿವಾಟುಗಳನ್ನು ಇಡಿ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ಆದರೆ ಶೋಧ ಕಾರ್ಯದ ವೇಳೆ ಈ ಸಂಸ್ಥೆಗೆ ಸಂಬಂಧಿಸಿದ ವ್ಯಕ್ತಿಗಳು ಹಾಜರಿರದ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದ ಶೋಧ ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಯಂಗ್ ಇಂಡಿಯನ್ ಸಂಸ್ಥೆಯ ಪದಾಧಿಕಾರಿಯಾಗಿರುವ ಮಲ್ಲಿಕಾರ್ಜುನ ಖರ್ಗೆಗೆ ಇಡಿ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದು, ತನಿಖೆ ವೇಳೆ ಹಾಜರಿರುವಂತೆ ಸೂಚನೆ ನೀಡಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರ ವಿಚಾರಣೆ ಜಾರಿ ನಿರ್ದೇಶನಾಲಯದಿಂದ ನಡೆದಿದೆ. ಹಿರಿಯ ನಾಯಕ ಖರ್ಗೆ ಮತ್ತು ಪಕ್ಷದ ಖಜಾಂಚಿ ಪವನ್ ಬನ್ಸಾಲ್ ಅವರನ್ನು ಈ ಹಿಂದೆಯೂ ಇಡಿ ಈ ಪ್ರಕರಣ ಸಂಬಂಧ ಪ್ರಶ್ನಿಸಿತ್ತು.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ90 ಕೋಟಿ ರೂ. ಅಕ್ರಮ ವರ್ಗಾವಣೆ ನಡೆದಿದೆ ಎಂಬುದು ಇಡಿ ಆರೋಪ. ಆದರೆ ಕಾಂಗ್ರೆಸ್ ಪಕ್ಷ ಹೇಳುವ ಪ್ರಕಾರ ಈ ಹಣವನ್ನು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಸಂಸ್ಥೆಗೆ ಪಾವತಿ ಮಾಡಲಾಗಿದೆ ಎನ್ನುತ್ತದೆ. ಲೆಕ್ಕದ ಪುಸ್ತಕಗಳಲ್ಲಿ ನಮೂದಾಗಿರುವ ಈ ಮೊತ್ತದ ವಹಿವಾಟು ನಡೆದಿಲ್ಲ ಎನ್ನುವುದು ಇಡಿ ಆರೋಪವಾಗಿದೆ. ಬಳಿಕ ಅಸೋಸಿಯೇಟೆಡ್ ಜರ್ನಲ್ಸ್ ಸಂಸ್ಥೆಯು ತನ್ನ 800 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಕೇವಲ 50 ಲಕ್ಷ ರೂ.ಗಳಿಗೆ ಯಂಗ್ ಇಂಡಿಯನ್ಗೆ ಬಿಟ್ಟು ಕೊಟ್ಟಿದ್ದಲ್ಲದೆ, ಕಾಂಗ್ರೆಸ್ಗೆ ನೀಡಬೇಕಿದ್ದ 90 ಕೋಟಿ ರೂ. ಸಾಲವನ್ನೂ ಇತ್ಯರ್ಥ ಮಾಡಿಕೊಂಡಿದೆ. ಆದರೆ ಪಕ್ಷ ಅಥವಾ ಯಾವುದೇ ಸಂಸ್ಥೆಗಳು 90 ಕೋಟಿ ರೂ. ವಹಿವಾಟಿಗೆ ಸಂಬಂಧಿಸಿದಂತೆ ಸಾಕ್ಷ್ಯ ಒದಗಿಸಿಲ್ಲ ಎಂಬುದು ಇಡಿ ಆರೋಪ ಎನ್ನಲಾಗಿದೆ.