ಬೆಂಗಳೂರು,ಆ 04 (DaijiworldNews/MS): ಕನ್ನಡ ಚಲನಚಿತ್ರರಂಗದ ಹೆಸರಾಂತ ಹಾಸ್ಯ ಕಲಾವಿದ ಟೆನಿಸ್ ಕೃಷ್ಣ ಹಾಗೂ ಅವರ ಪುತ್ರ ಆಮ್ ಆದ್ಮಿ ಪಕ್ಷಕ್ಕೆ ಇಂದು ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.
ಇಂದು ಬೆಳಿಗ್ಗೆ 11 ಗಂಟೆಗೆ ನಗರದ ಖಾಸಗಿ ಹೋಟೆಲ್ ನಲ್ಲಿ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹಾಗೂ ಇನ್ನಿತರ ಹಿರಿಯ ಮುಖಂಡರ ಸಮ್ಮುಖದಲ್ಲಿ ಸೇರ್ಪಡೆಗೊಂಡಿದ್ದಾರೆ.
ಈ ವೇಳೆ ಮಾತನಾಡಿದ ಟೆನಿಸ್ ಕೃಷ್ಣ, ಆಮ್ ಆದ್ಮಿ ಪಕ್ಷ ಭ್ರಷ್ಟಾಚಾರ ಇಲ್ಲದ ಪಕ್ಷವಾಗಿದ್ದು, ಜನ ನೆಮ್ಮದಿಯಾಗಿ ಜೀವನ ನಡೆಸಲು ಆಡಳಿತ ನಡೆಸಲು ಕ್ರೇಜಿವಾಲ್ ಅವರ ಆಡಳಿತ ಮಾದರಿಯಾಗಿದೆ. ನಾನು ಅಧಿಕಾರದ ಬದಲು ಜನರ ಸೇವೆ ಮಾಡಲು ನಾನು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ. ಸರ್ಕಾರಿ ಕಾಲೇಜುಗಳನ್ನು ಮುಚ್ಚುತ್ತಿರುವುದರ ವಿರುದ್ಧ ಹಾಗೂ ಕೋಲಾರದಲ್ಲಿರುವ ನೀರಿನ ಸಮಸ್ಯೆ ಕುರಿತು ಹೋರಾಟ ಮಾಡಲಿದ್ದೇನೆ .ಬಿಜೆಪಿ ಬಲವಂತವಾಗಿ ಹಿಂದಿ ಹೇರಿಕೆ ಮಾಡಲು ಯತ್ನಿಸುತ್ತಿದೆ. ಕರ್ನಾಟಕದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮವಾಗಿದ್ದು, ಕನ್ನಡ ಉಳಿಯಬೇಕು ಎಂದು ಈ ವೇಳೆ ಹೇಳಿದ್ದಾರೆ.