ನವದೆಹಲಿ, ಆ 04 (DaijiworldNews/MS): ಫಾಸ್ಟಾಗ್ ಅಳವಡಿಕೆ ಕಡ್ಡಾಯ ಮಾಡಿದ್ದ ಕೇಂದ್ರ ಸರ್ಕಾರವು ಮುಂದಿನ ಆರು ತಿಂಗಳಲ್ಲಿ ಈ ವ್ಯವಸ್ಥೆಗೆ ತಿಲಾಂಜಲಿ ನೀಡಲಿದೆಯೇ ? ಹೀಗೊಂದು ಸುಳಿವು ರಾಜ್ಯಸಭೆಯಲ್ಲಿ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಾತಿನಿಂದ ಸಿಕ್ಕಿದೆ ಎಂದರೆ ತಪ್ಪಾಗಲಾರದು.
ದೇಶದಲ್ಲಿ ಈಗಿರುವ ಟೋಲ್ ಪ್ಲಾಜಾಗಳ ವ್ಯವಸ್ಥೆ ಬದಲಾಯಿಸಿ, ಹೊಸ ತಂತ್ರಜ್ಞಾನಗಳನ್ನು ಸರ್ಕಾರ ಪರಿಶೀಲಿಸುತ್ತಿದೆ ಮತ್ತು ಮುಂದಿನ ಆರು ತಿಂಗಳಲ್ಲಿ ಹೊಸ ವ್ಯವಸ್ಥೆಯನ್ನು ಪರಿಚಯಿಸುವ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದು ಸಾರಿಗೆ ಸಚಿವ ನಿತಿನ್ ಗಡ್ಕರಿ ಬುಧವಾರ ರಾಜ್ಯಸಭೆಗೆ ತಿಳಿಸಿರುವುದು ಈ ಕುತೂಹಲಕ್ಕೆ ಕಾರಣವಾಗಿದೆ.
"ಟೋಲ್ ಪ್ಲಾಜಾಗಳು ಸಂಚಾರ ದಟ್ಟಣೆ ಮತ್ತು ಉದ್ದನೆಯ ಸರತಿ ಸಾಲುಗಳಂತಹ ಅನೇಕ ಸಮಸ್ಯೆಗಳನ್ನು ಸೃಷ್ಟಿಸಿವೆ, ಇದನ್ನು ಸರ್ಕಾರ ಕೊನೆಗೊಳಿಸಲು ಬಯಸಿದೆ. ನಾವು ಫಾಸ್ಟ್ಯಾಗ್ ಬದಲು ಜಿಪಿಎಸ್ ವ್ಯವಸ್ಥೆ ಪರಿಚಯಿಸುವ ಕುರಿತು ಚಿಂತನೆ ನಡೆಸಿದ್ದೇವೆ. ಇದಕ್ಕಾಗಿ ಮುಂದೆ 2 ಆಯ್ಕೆಗಳಿವೆ".
"ಮೊದಲನೆಯದು, ಉಪಗ್ರಹ ಆಧಾರಿತ ಟೋಲ್ ವ್ಯವಸ್ಥೆ. ಇಲ್ಲಿ ಕಾರಿನಲ್ಲೇ ಜಿಪಿಎಸ್ ಅಳವಡಿಸಲಾಗುತ್ತದೆ. ಕಾರು ಟೋಲ್ ಪ್ಲಾಜಾ ದಾಟಿದ ತಕ್ಷಣ ಬ್ಯಾಂಕ್ ಖಾತೆಯಿಂದ ಟೋಲ್ ಮೊತ್ತ ಕಡಿತಗೊಳ್ಳುತ್ತದೆ. ಇನ್ನೊಂದು, ನಂಬರ್ ಪ್ಲೇಟ್ ತಂತ್ರಜ್ಞಾನ. ಇಲ್ಲಿ ಟೋಲ್ ಪ್ಲಾಜಾಗಳ ಅಗತ್ಯವಿರುವುದಿಲ್ಲ. ನಂಬರ್ಪ್ಲೇಟ್ನ ಫೋಟೋ ಸೆರೆಯಾದೊಡನೆ, ಅತ್ಯಾಧುನಿಕ ಕಂಪ್ಯೂಟರೀಕೃತ ಡಿಜಿಟಲ್ ವ್ಯವಸ್ಥೆಯ ಮೂಲಕ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಳ್ಳುತ್ತದೆ. ಇದರಿಂದ ಟೋಲ್ನಲ್ಲಿ ಕ್ಯೂ ನಿಂತು ಕಾಯುವ ಅಗತ್ಯವಿರುವುದಿಲ್ಲ" ಎಂದು ಗಡ್ಕರಿ ಹೇಳಿದ್ದಾರೆ.
"ಈ ಎರಡು ಆಯ್ಕೆಯಲ್ಲಿ ನಂಬರ್ ಪ್ಲೇಟ್ ತಂತ್ರಜ್ಞಾನವ ಆಯ್ಕೆ ಮಾಡುತ್ತೇವೆ. ನಾವು ಅಧಿಕೃತ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದಿದ್ದರೂ, ನಂಬರ್ ಪ್ಲೇಟ್ ತಂತ್ರಜ್ಞಾನ ಅಳವಡಿಸಿದರೆ ಟೋಲ್ ಪ್ಲಾಜಾ ಬೇಕಾಗುವುದಿಲ್ಲ . ಇಲ್ಲಿ ಅತ್ಯಾಧುನಿಕ ಗಣಕೀಕೃತ ಡಿಜಿಟಲ್ ವ್ಯವಸ್ಥೆ ಇರುತ್ತದೆ, ಅದರ ಮೂಲಕ ನಾವು ಪರಿಹಾರವನ್ನು ನೀಡಬಹುದು. ಹೀಗಾಗಿ ಟೋಲ್ ಗಳಲ್ಲಿ ಕ್ಯೂ ನಿಲ್ಲುವ ವ್ಯವಸ್ಥೆ ತಪ್ಪಿಸಬಹುದು.
ಆದರೆ ಅದಕ್ಕಾಗಿ ನಾವು ಸಂಸತ್ತಿನಲ್ಲಿ ಮಸೂದೆಯನ್ನು ತರಬೇಕಾಗಿದೆ ಏಕೆಂದರೆ ಯಾರಾದರೂ ಟೋಲ್ ಪಾವತಿಸದಿದ್ದರೆ ಅವರಿಗೆ ದಂಡ ವಿಧಿಸಲು ಇನ್ನೂ ಯಾವುದೇ ಕಾನೂನು ನಮ್ಮಲ್ಲಿ ಲಭ್ಯವಿಲ್ಲ" ಎಂದು ಹೇಳಿದ್ದಾರೆ.