ಚಿಕ್ಕಮಗಳೂರು, ಆ 03 (DaijiworldNews/DB): ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಸೂತಕದ ಮನೆಯಲ್ಲಿ ಸಂಭ್ರಮ ಪಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸಂವೇದನಾಶೀಲತೆಯನ್ನೇ ಕಳೆದುಕೊಂಡಿದೆ. ರಾಜ್ಯದ ಜನರು ಸಂಕಷ್ಟದಲ್ಲಿದ್ದಾಗ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಬಂದವರೆಲ್ಲ ವ್ಯಕ್ತಿಯನ್ನು ಹಾಡಿ ಹೊಗಳುವುದು ಮಾನವೀಯತೆಯಲ್ಲ. ಈ ನಡೆ ಅವರಿಗೆ ಶೋಭೆ ತರುವುದಿಲ್ಲ ಎಂದು ಟೀಕಿಸಿದರು.
ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ ತುಂಬಿದಕ್ಕೆ ಹಮ್ಮಿಕೊಂಡಿದ್ದ ಜನೋತ್ಸವ ಕಾರ್ಯಕ್ರಮವನ್ನು ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಹಿನ್ನೆಲೆಯಲ್ಲಿ ರದ್ದುಗೊಳಿಸಿದ್ದೆವು. ಆದರೆ ಆಗ ನಮ್ಮನ್ನು ಪ್ರಶ್ನಿಸಿದ್ದ ಕಾಂಗ್ರೆಸ್ಸಿಗರು ಈಗ ಸೂತಕದ ಮನೆಯಲ್ಲಿ ಸಂಭ್ರಮ ಪಡುತ್ತಿರುವುದು ದುರದೃಷ್ಟಕರ ಎಂದರು.
ಒಗ್ಗಟ್ಟು ಎಷ್ಟು ದಿನ ಇರುತ್ತದೆ ಎನ್ನುವುದೇ ಪ್ರಶ್ನೆಯಾಗಿದೆ. ಅದನ್ನು ನೋಡೋಣ. ರಾಮಮಂದಿರ ನಿರ್ಮಿಸುವಾಗ ಶಾಲೆ ಕಟ್ಟಿ ಎನ್ನುತ್ತಿದ್ದರು. ಇದೀಗ ಸುಮಾರು 100 ಕೋಟಿ ಖರ್ಚು ಮಾಡಿ ಉತ್ಸವ ಮಾಡುತ್ತಿದ್ದಾರೆ. ಮಳೆಯಿಂದಾಗಿ ಮನೆ, ಭೂಮಿ ಕಳೆದುಕೊಂಡವರಿಗೆ ಆ ಹಣದಲ್ಲಿ ಬದುಕು ಕಟ್ಟಿಕೊಡಬಹುದಿತ್ತು ಎಂದು ಇದೇ ವೇಳೆ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡರು.
ದೇವರು ಸಿದ್ದರಾಮಯ್ಯನವರಿಗೆ ಆಯಸ್ಸು-ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಇದೇ ವೇಳೆ ಸಿ.ಟಿ. ರವಿ ಹೇಳಿದರು.