ನವದೆಹಲಿ, ಆ 03 (DaijiworldNews/DB): ಸಾಮಾಜಿಕ ಜಾಲತಾಣಗಳ ಪ್ರೊಫೈಲ್ ಚಿತ್ರವನ್ನಾಗಿ ತಿರಂಗಾವನ್ನು ಹಾಕಿಕೊಳ್ಳಿ ಎಂಬ ಪ್ರಧಾನಿ ಕರೆಯನ್ನು ಆರೆಸ್ಸೆಸ್ ಅನುಸರಿಸಲಿದೆಯೇ ಎಂದು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
ಜವಾಹರಲಾಲ್ ನೆಹರೂ ಅವರು ತ್ರಿವರ್ಣ ಧ್ವಜವನ್ನು ಹಿಡಿದಿರುವ ಚಿತ್ರವನ್ನು ಟ್ವಿಟರ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳ ಪ್ರೊಫೈಲ್ ಚಿತ್ರವನ್ನಾಗಿಸಿಕೊಂಡಿರುವ ಜೈರಾಮ್ ರಮೇಶ್, ನನ್ನ ತಿರಂಗ ನನ್ನ ಹೆಮ್ಮ (#MyTirangaMyPride) ಹ್ಯಾಶ್ಟ್ಯಾಗ್ನಲ್ಲಿ ಟ್ವೀಟ್ ಮಾಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 52 ವರ್ಷ ತನಕ ನಾಗ್ಪುರದ ಮುಖ್ಯ ಕಚೇರಿಯಲ್ಲಿ ಸಂಘವೊಂದು ತ್ರಿವರ್ಣ ಧ್ವಜವನ್ನೇ ಹಾರಿಸುವ ಮನಸ್ಸು ಮಾಡಿರಲಿಲ್ಲ. ಇನ್ನು ಇದೀಗ ತಿರಂಗಾವನ್ನು ಪ್ರೊಫೈಲ್ ಡಿಪಿಯಾಗಿ ಬದಲಾಯಿಸಿ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವುದನ್ನು ಆ ಸಂಘವು ಅನುಸರಿಸುತ್ತದೆಯೇ ಎಂದು ಆರೆಸ್ಸೆಸ್ನ್ನು ಉದ್ದೇಶಿಸಿ ಅವರು ಪ್ರಶ್ನೆ ಮಾಡಿದ್ದಾರೆ.
ನೆಹರೂ ತಿರಂಗಾ ಹಿಡಿದುಕೊಂಡಿರುವ ಚಿತ್ರವನ್ನು ನಾವು ಡಿಪಿಯನ್ನಾಗಿ ಮಾಡಿಕೊಂಡಿದ್ದೇವೆ. ಆದರೆ ಪ್ರಧಾನಿ ಸಂದೇಶ ಅವರದೇ ಕುಟುಂಬಕ್ಕೆ ತಲುಪಿದಂತೆ ಕಾಣುತ್ತಿಲ್ಲ ಎಂದವರು ಇದೇ ವೇಳೆ ಲೇವಡಿ ಮಾಡಿದ್ದಾರೆ.
1929ರ ಲಾಹೋರ್ ಸೆಷನ್ನಲ್ಲಿ ರಾವಿ ನದಿಯ ದಡದಲ್ಲಿ ಪಂಡಿತ್ ನೆಹರೂ ಅವರು ರಾಷ್ಟ್ರ ಧ್ವಜವನ್ನು ಹಾರಿಸಿದ್ದರಲ್ಲದೆ, ತ್ರಿವರ್ಣ ಧ್ವಜ ಕೆಳಗಿಳಿಯಬಾರದು ಎಂದು ಕರೆ ನೀಡಿದ್ದರು ಎಂದವರು ಇದೇ ವೇಳೆ ಸ್ಮರಿಸಿದರು.
ಇನ್ನು ಕಾಂಗ್ರೆಸ್ ನಾಯಕರ ಪ್ರೊಫೈಲ್ ಫೋಟೋಗಳಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ತ್ರಿವರ್ಣ ಧ್ವಜವನ್ನು ಹಿಡಿದಿರುವ ಚಿತ್ರವು ರಾರಾಜಿಸುತ್ತಿದೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ನಾಯಕರು ಈ ಫೋಟೋವನ್ನು ಡಿಪಿಯಾಗಿ ಮಾಡಿಕೊಂಡಿದ್ದಾರೆ.