ದಾವಣಗೆರೆ, ಆ 03 (DaijiworldNews/DB): ನಾನೂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಬ್ಬರೂ ಒಟ್ಟಾಗಿಯೇ ಇದ್ದೇವೆ. ಆದರೆ ವಿಪಕ್ಷಗಳು ಮತ್ತು ಕೆಲವು ಮಾಧ್ಯಮಗಳು ನಮ್ಮಿಬ್ಬರ ವಿಚಾರದಲ್ಲಿ ಗೊಂದಲ ಉಂಟು ಮಾಡುವ ಪ್ರಯತ್ನದಲ್ಲಿ ನಿರತವಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ದಾವಣಗೆರೆಯಲ್ಲಿ ಅಭಿಮಾನಿಗಳು ಏರ್ಪಡಿಸಿದ್ದ ತಮ್ಮ 75ನೇ ವರ್ಷದ ಹುಟ್ಟುಹಬ್ಬದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಇಂದು ಮಾತನಾಡಿದ ಅವರು, ಈ ಕಾರ್ಯಕ್ರಮ ಡಿಕೆಶಿಯವರಿಗೆ ಇಷ್ಟವಿಲ್ಲವಾದ್ದರಿಂದ ಅವರು ವಿರೋಧಿಸುತ್ತಿದ್ದಾರೆ ಎಂದು ಸುಳ್ಳು ಪ್ರಚಾರ ಮಾಡಲಾಯಿತು. ಆದರೆ ವಿರೋಧಿಗಳು ನಾವಿಬ್ಬರೂ ಒಟ್ಟಿಗೆ ಇರುವುದನ್ನು ನೋಡಬಹುದು. ಒಗ್ಗಟ್ಟಿನಿಂದಲೇ ಇದ್ದೇವೆ ಎಂದರು.
ಬಿಜೆಪಿ ಆಡಳಿತದಿಂದಾಗಿ ದೇಶ ಮತ್ತು ರಾಜ್ಯದಲ್ಲಿ ಕೋಮುವಾದ, ಭ್ರಷ್ಟಾಚಾರ ವ್ಯಾಪಕವಾಗುತ್ತಿದೆ. ಸಾಮಾನ್ಯ ಜನರಿಗೆ ಜೀವನ ನಿರ್ವಹಣೆಯೇ ದುಸ್ತರವಾಗಿದೆ. ಜನಪರ ಆಡಳಿತಕ್ಕಾಗಿ ಬಿಜೆಪಿಯನ್ನು ರಾಜ್ಯ ಮತ್ತು ದೇಶದಿಂದ ಕಿತ್ತೊಗೆದು ಕಾಂಗ್ರೆಸ್ನ್ನು ಅಧಿಕಾರಕ್ಕೆ ತರುವಲ್ಲಿ ನಿಮ್ಮೆಲ್ಲರ ಸಹಕಾರ ಬೇಕು ಎಂದು ಈ ವೇಳೆ ಮನವಿ ಮಾಡಿದರು.