ಪಾವಗಡ, ಆ 03 (DaijiworldNews/DB): ನಿರಂತರ ಧಾರಾಕಾರ ಮಳೆಗೆ ಹೆದರಿಯೋ ಅಥವಾ ಮಳೆಯಿಂದ ರಕ್ಷಿಸಿಕೊಳ್ಳಲೋ ಕರಡಿಯೊಂದು ಓಡಿ ಬಂದು ಮನೆಯ ಬೆಡ್ ರೂಂನೊಳಗೆ ಮಲಗಿದ ಪ್ರಸಂಗ ತಾಲೂಕಿನ ನಿಡಗಲ್ಲು ಹೋಬಳಿ ದೇವಲಕೆರೆ ಗ್ರಾಮದಲ್ಲಿ ನಡೆದಿದೆ.
ಇಲ್ಲಿ ಕಳೆದ ರಾತ್ರಿಯಿಂದಲೇ ನಿರಂತರ ಧಾರಾಕಾರ ಮಳೆ ಸುರಿಯುತ್ತಿದೆ. ಮಳೆಯಿಂದ ರಕ್ಷಿಸಿಕೊಳ್ಳುವುದಕ್ಕೋ, ಅಥವಾ ವರುಣಾರ್ಭಟಕ್ಕೆ ಹೆದರಿಯೋ ಕರಡಿಯೊಂದು ಕಾಡಿನಿಂದ ನಾಡು ಸೇರಿದೆ. ಕೇವಲ ನಾಡು ಸೇರಿರುವುದಷ್ಟೇ ಅಲ್ಲ, ನಿರ್ಮಾಣ ಹಂತದಲ್ಲಿದ್ದ ಮಂಜುಳಾ ಪುಟ್ಟರಾಜು ಅವರ ಮನೆಯ ಬೆಡ್ರೂಂನೊಳಗೆ ಬಂದು ಬೆಚ್ಚಗೆ ಮಲಗಿಕೊಂಡಿದೆ.
ಬುಧವಾರ ಬೆಳಗ್ಗೆ ಮನೆ ಯಜಮಾನರು ಬಂದು ನೋಡಿದಾಗ ಬೆಡ್ರೂಂನಲ್ಲಿ ಕರಡಿ ಮಲಗಿಕೊಂಡಿರುವುದು ಗೊತ್ತಾಗಿದೆ. ಇದರಿಂದ ಗಾಬರಿಯಾದ ಮನೆ ಮಾಲಕರು ಕೂಡಲೇ ಗ್ರಾಮಸ್ಥರು ಮತ್ತು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಕರಡಿಯನ್ನು ಗ್ರಾಮದಿಂದ ಕಾಡಿಗೆ ಓಡಿಸಿದರು. ಏಕಾಏಕಿ ಕರಡಿ ಗ್ರಾಮದೊಳಗೆ ನುಗ್ಗಿರುವುದರಿಂದ ಗ್ರಾಮಸ್ಥರಿಗೆ ಆತಂಕ ಎದುರಾಗಿದೆ.