ರಾಯಚೂರು, ಆ 03 (DaijiworldNews/DB): ಹತ್ಯೆ ಪ್ರಕರಣಗಳಲ್ಲಿ ಪರಿಹಾರ ನೀಡುವಾಗ ಸರ್ಕಾರ ತಾರತಮ್ಯ ಮಾಡಬಾರದು ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಯವರು ಹೇಳಿದ್ದಾರೆ.
ದುಷ್ಕರ್ಮಿಗಳಿಂದ ಹತ್ಯೆಯಾದ ಪ್ರವೀಣ್ ನೆಟ್ಟಾರು ಮನೆಗೆ ಮುಖ್ಯಮಂತ್ರಿಯವರು ಭೇಟಿ ನೀಡಿ ಪರಿಹಾರ ನೀಡಿದ ವಿಚಾರವಾಗಿ ಚಾತುರ್ಮಾಸ ವೃತದಲ್ಲಿರುವ ಶ್ರೀಗಳಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರಾಣ ಕಳೆದುಕೊಂಡವರೆಲ್ಲ ಮನುಷ್ಯರೇ ಮತ್ತು ಎಲ್ಲರೂ ಸಮಾನರು. ಸರ್ಕಾರ ಪರಿಹಾರ ನೀಡುವ ವಿಚಯದಲ್ಲಿ ತಾರತಮ್ಯ ಮಾಡಬಾರದು. ಹತ್ಯೆಯಾದ ಇತರ ಕುಟುಂಬಗಳಿಗೂ ಪರಿಹಾರ ನೀಡಿದರೆ ಉತ್ತಮ ಎಂದರು.
ಮನೆಯ ಮಗನನ್ನು ಕಳೆದುಕೊಂಡ ಸಂಕಟ ಅವರಿಗಷ್ಟೆ ಗೊತ್ತು. ಕುಟುಂಬಕ್ಕೆ ಹಣದ ಸಹಾಯ ಅಥವಾ ಕೆಲಸ ನೀಡುವುದು ಪರ್ಯಾಯ ಮಾರ್ಗ ಖಂಡಿತಾ ಅಲ್ಲ. ಹಣದಿಂದ ಜೀವವನ್ನು ತುಲನೆ ಮಾಡುವುದು ತಪ್ಪು. ಆದರೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ಎಸಗುವುದು ಸರಿಯಲ್ಲ ಎಂದವರು ಅಭಿಪ್ರಾಯಪಟ್ಟರು.
ಶಾಂತಿ, ಸಹಬಾಳ್ವೆಯಿಂದ ದೇಶ ಅಭಿವೃದ್ದಿ ಹೊಂದುತ್ತದೆ. ಸಮಯದಾಯಗಳ ಮಧ್ಯೆ ಆಕ್ರಮಣ, ದಬ್ಬಾಳಿಕೆ ಇರಬಾರದು. ಇಂತಹವುಗಳನ್ನು ಸರ್ಕಾರ ಮಟ್ಟ ಹಾಕಬೇಕು ಎಂದವರು ಇದೇ ವೇಳೆ ಒತ್ತಾಯಿಸಿದರು.