ಬೆಂಗಳೂರು, ಆ 03 (DaijiworldNews/MS): ಐಸಿಯುನಲ್ಲಿರುವ ಬಿಜೆಪಿ ಸರ್ಕಾರದ ಕೊನೆಯ ದರ್ಶನ ಮಾಡಲೆಂದು ಕೇಂದ್ರದ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಕರ್ನಾಟಕಕ್ಕೆ ಆಗಮಸುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ವ್ಯಂಗ್ಯವಾಡಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, " ಜನಾಕ್ರೋಶ ಅಷ್ಟೇ ಅಲ್ಲ, ಕಾರ್ಯಕರ್ತರ ಆಕ್ರೋಶವನ್ನೂ ಎದುರಿಸುತ್ತಿರುವ ಬಿಜೆಪಿ ಸರ್ಕಾರ ಐಸಿಯೂ ಸೇರಿರುವುದಕ್ಕೆ ಅಮಿತ್ ಶಾ ಅವರು ಆತಂಕದಲ್ಲಿ ಓಡೋಡಿ ಬರುತ್ತಿದ್ದಾರಂತೆ.ಯಾರ ತಲೆದಂಡವಾಗಬಹುದು ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ, ಗೃಹಮಂತ್ರಿ, ರಾಜ್ಯಾಧ್ಯಕ್ಷ ಈ ಮೂವರಲ್ಲಿ ಯಾರ ಕುರ್ಚಿ ಕುಸಿಯಲಿದೆ?" ಎಂದು ಲೇವಡಿ ಮಾಡಿದೆ.
"ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕದ ಧಿಡೀರ್ ಭೇಟಿ ಹಿಂದಿರುವ ಉದ್ದೇಶವೇನು? ಕಾನೂನು ಅವ್ಯವಸ್ಥೆಯನ್ನ ಕಣ್ತುಂಬಿಕೊಳ್ಳುವುದಕ್ಕೋ? ICU ನಲ್ಲಿರುವ ರಾಜ್ಯ ಬಿಜೆಪಿ ಪಕ್ಷದ ಕೊನೆಯ ದರ್ಶನ ಮಾಡುವುದಕ್ಕೋ? ಬಿಜೆಪಿಗೆ ಇನ್ನಷ್ಟು 'ಶವ ರಾಜಕೀಯ'ದ ಟಾಸ್ಕ್ ಕೊಡುವುದಕ್ಕೋ? ಕದ್ದುಮುಚ್ಚಿ ಆಗಮಿಸುತ್ತಿರುವುದರ ಹಿಂದಿನ ಅಜೆಂಡಾವೇನು?" ಎಂದು ಪ್ರಶ್ನಿಸಿದೆ.