ಬೆಂಗಳೂರು, ಆ 03 (DaijiworldNews/DB): ರಾಜ್ಯದಲ್ಲಿ ಮಳೆ ಹಾನಿ ಪರಿಹಾರ ಕಾರ್ಯ ನಡೆಯುತ್ತಿದೆ. ಆದರೆ ಕಳೆದ ಮೂರು ವರ್ಷಗಳಲ್ಲಿ ಮಳೆಯಿಂದಾಗಿ ಮನೆ ಕಳೆದುಕೊಂಡು ಪರಿಹಾರ ಪಡೆದವರ ಮನೆಗೆ ಈ ಬಾರಿ ಮತ್ತೆ ಮಳೆಯಿಂದ ಹಾನಿಯಾದರೆ ಪರಿಹಾರ ನೀಡುವಂತಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.
ಈ ಹಿಂದೆ ಮನೆ ಕಳೆದುಕೊಂಡು ಅಥವಾ ಹಾನಿಯುಂಟಾಗಿ ಪರಿಹಾರ ನೀಡಿದವರಿಗೆ ಮತ್ತೆ ಪರಿಹಾರ ನೀಡಬಹುದೇ ಎಂದು ಕೆಲವು ಜಿಲ್ಲಾಧಿಕಾರಿಗಳು ಪತ್ರ ಬರೆದು ಸ್ಪಷ್ಟನೆ ಕೇಳಿದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ವಿಭಾಗವು ಈ ಸೂಚನೆ ನೀಡಿದೆ.
2019, 2020, 2021ನೇ ವರ್ಷದಲ್ಲಿ ಮಳೆಯಿಂದಾಗಿ ಮನೆ ಕಳೆದುಕೊಂಡು ಮತ್ತು ಮನೆಗೆ ಹಾನಿ ಸಂಭವಿಸಿದ ಕಾರಣಕ್ಕಾಗಿ ಎ ಅಥವಾ ಬಿ ಕೆಟಗರಿಯಲ್ಲಿ ಪರಿಹಾರ ಪಡೆದಿರುವ ಸಂತ್ರಸ್ತರು ಈ ಬಾರಿಯೂ ಮಳೆಯಿಂದಾಗಿ ಮನೆ ಕಳೆದುಕೊಂಡಲ್ಲಿ ಅಥವಾ ಮನೆಗೆ ಹಾನಿ ಉಂಟಾದಲ್ಲಿ ಅಂತಹವರಿಗೆ ಮತ್ತೆ ಪರಿಹಾರ ನೀಡುವುದಕ್ಕೆ ಅವಕಾಶವಿಲ್ಲ.
ಆದರೆ ಈ ಮೂರೂ ವರ್ಷಗಳಲ್ಲಿ ಮನೆಗೆ ಸಣ್ಣಪುಟ್ಟ ಹಾನಿಯಾಗಿ ಸಿ ಕೆಟಗರಿಯಲ್ಲಿ 50 ಸಾವಿರ ರೂ. ಪಡೆದವರಿಗೆ ಈ ಬಾರಿಯೂ ಮನೆಗೆ ಹಾನಿ ಅಥವಾ ಮನೆ ಕಳೆದುಕೊಂಡಲ್ಲಿ ಪರಿಹಾರ ನೀಡಬಹುದು. ಅಂತಹವರಿಗೆ ಎ,ಬಿ,ಸಿ ವಿಭಾಗದಲ್ಲಿ ಪರಿಹಾರ ಪಾವತಿ ಮಾಡಬಹುದು ಎಂದು ತಿಳಿಸಿದೆ.
ಪರಿಹಾರ ನೀಡಬೇಕಾದರೆ ಸಂತ್ರಸ್ತರು ವಾಸ ಮಾಡುತ್ತಿರುವ ಮನೆ ಅಧಿಕೃತವಾಗಿರಬೇಕು. ಜಮೀನಿನಲ್ಲಿ ಕಟ್ಟಿರುವ ತೋಟದ ಮನೆ, ಸರಕಾರಿ ಜಾಗ, ಗೋಮಾಳಗಳಲ್ಲಿ ಕಟ್ಟಿರುವ ಮನೆ ಅನಧಿಕೃತವಾಗಿದ್ದಲ್ಲಿ ನಿಯಮಾನುಸಾರ ಪ್ರತಿಜ್ಞಾ ಪತ್ರ ಸ್ವೀಕರಿಸಿ 1 ಲಕ್ಷ ರೂ. ಎಕ್ಸ್ ಗ್ರೇಷಿಯಾ ಪಾವತಿ ಮಾಡಬಹುದು ಎಂದು ತಿಳಿಸಲಾಗಿದೆ.