ದಾವಣಗೆರೆ, ಆ 03 (DaijiworldNews/DB): ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ವರ್ಷದ ಹುಟ್ಟುಹಬ್ಬದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಬೆಣ್ಣೆನಗರಿ ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಸಮಾರಂಭ ಇಂದು ಅದ್ದೂರಿಯಾಗಿ ನಡೆಯಲಿದ್ದು, ಕಾರ್ಯಕ್ರಮ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ.
ಶಾಮನೂರು ಪ್ಯಾಲೇಸ್ ಮೈದಾನದಲ್ಲಿ ಬೆಳಗ್ಗೆ 10 ಗಂಟೆಗೇ ಕಾರ್ಯಕ್ರಮ ಆರಂಭಗೊಂಡಿದ್ದು, ಮಧ್ಯಾಹ್ನ 12 ಗಂಟೆಗೆ ಸಿದ್ದರಾಮಯ್ಯ ಅವರು ಆಗಮಿಸಲಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 12.30ಕ್ಕೆ ಬರಲಿದ್ದು, ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ವೇದಿಕೆಯ ಮುಂಭಾಗದಲ್ಲಿ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಸೇರಿದಂತೆ ಕೇಂದ್ರ ನಾಯಕರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಎಡಭಾಗದಲ್ಲಿ ಇತರ ಜನಪ್ರತಿನಿಧಿಗಳು ಕುಳಿತು ಕಾರ್ಯಕ್ರಮ ವೀಕ್ಷಿಸಲಿದ್ದಾರೆ.
ಅಭಿನಂದಿಸಲು ಮುಗಿಬಿದ್ದ ಜನ
ಸದ್ಯ ಸಿದ್ದರಾಮೋತ್ಸವಕ್ಕೆ ಸಿದ್ದರಾಮಯ್ಯ ಅವರ ಅಭಿಮಾನಿಗಳು ಸಾಗರೋಪದಿಯಲ್ಲಿ ಸೇರುತ್ತಿದ್ದು, ಸಿದ್ದರಾಮಯ್ಯನವರ ಫೋಟೋ ಹಿಡಿದುಕೊಂಡು ಘೋಷಣೆಗಳನ್ನು ಕೂಗುತ್ತಾ ಸಂಭ್ರಮಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ದಾವಣಗೆರೆಯ ಅತಿಥಿ ಗೃಹದಿಂದ ಕಾರ್ಯಕ್ರಮ ನಡೆಯುವ ವೇದಿಕೆಗೆ ತೆರಳುವ ವೇಳೆ ಅವರನ್ನು ಅಭಿನಂದಿಸಲು ಅಭಿಮಾನಿಗಳು ಮುಗಿಬಿದ್ದರು. ಈ ವೇಳೆ ಅಭಿಮಾನಿಗಳನ್ನು ನಿಯಂತ್ರಿಸಲು ಸಿದ್ದರಾಮಯ್ಯ ಅವರು ಹರಸಾಹಸ ಪಟ್ಟ ಪ್ರಸಂಗ ನಡೆಯಿತು.
ಕಾಲ್ನಡಿಗೆಯಲ್ಲೇ ಆಗಮನ
ಕಾರ್ಯಕ್ರಮಮದಲ್ಲಿ ಸುಮಾರು ಏಳೆಂಟು ಲಕ್ಷ ಜನ ಸೇರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನವೇ ಮೂರು ಲಕ್ಷಕ್ಕೂ ಹೆಚ್ಚು ಮಂದಿ ವೇದಿಕೆ ಬಳಿ ಸೇರಿದ್ದಾರೆ. ಈ ನಡುವೆ ದಾವಣಗೆರೆಯಲ್ಲಿ ಮಳೆ ಮತ್ತು ಮೋಡದ ವಾತಾವರಣವಿದ್ದು, ಕಾರ್ಯಕ್ರಮಕ್ಕೆ ಆಗಮಿಸುವ ಸಿದ್ದರಾಮಯ್ಯ ಅಭಿಮಾನಿಗಳಿಗೆ ಮಳೆ ಅಡ್ಡಿಯಾಗುತ್ತಿದೆ. ಬೆಳಗ್ಗೆ ಆರು ಗಂಟೆಯಿಂದಲೇ ಜನ ಕಿಕ್ಕಿರಿದು ಸೇರುತ್ತಿದ್ದರಿಂದ ಆಗಲೇ ಹೆದ್ದಾರಿ ಜಾಮ್ ಆಗಿತ್ತು. ಆದರೆ 9 ಗಂಟೆ ವೇಳೆಗೆ ಸುಮಾರು 15 ಕಿಲೋಮೀಟರ್ ವರೆಗೂ ವಾಹನದಟ್ಟಣೆ ಕಾಣಿಸಿಕೊಂಡಿದ್ದು, ಸಂಪೂರ್ಣ ಟ್ರಾಫಿಕ್ ಜಾಂ ಉಂಟಾಗಿದೆ. ಹೀಗಾಗಿ ವೇದಿಕೆಯಿಂದ 4-5 ಕಿಲೋ ಮೀಟರ್ ದೂರದಲ್ಲಿ ವಾಹನಗಳನ್ನು ನಿಲ್ಲಿಸಿ ಜನ ಕಾಲ್ನಡಿಗೆಯಲ್ಲೇ ಕಾರ್ಯಕ್ರಮ ನಡೆಯುವ ಸ್ಥಳದತ್ತ ಆಗಮಿಸುತ್ತಿದ್ದಾರೆ.
8000 ಬಸ್ ವ್ಯವಸ್ಥೆ
ಕಾರ್ಯಕ್ರಮಕ್ಕೆ ಆಗಮಿಸಲು ರಾಜ್ಯದ ವಿವಿಧೆಡೆಗಳಿಂದ 8000 ಬಸ್ಗಳ ವ್ಯವಸ್ಥೆ ಮಾಡಲಾಗಿದ್ದು, ಮುಂಜಾನೆಯಿಂದಲೇ ಬಂದವರಿಗೆ ಬೆಳಗ್ಗಿನ ಉಪಾಹಾರದ ವ್ಯವಸ್ಥೆಯನ್ನೂ ಮಾಡಲಾಗಿದೆ. 150 ಕೌಂಟರ್ ಗಳಲ್ಲಿ ಬಿಸಿಬೇಳೆ ಬಾತ್ ವ್ಯವಸ್ಥೆ ಮಾಡಲಾಗಿತ್ತು.