ಅಮರಾವತಿ, ಆ 03 (DaijiworldNews/DB): ವಿಶೇಷ ಆರ್ಥಿಕ ವಲಯದಲ್ಲಿ ಸಂಭವಿಸಿದ ಅನಿಲ ಸೋರಿಕೆಯಿಂದಾಗಿ ಗಾರ್ಮೆಂಟ್ಸ್ ಕಾರ್ಖಾನೆಯ ಕನಿಷ್ಠ 150 ಮಂದಿ ಕಾರ್ಮಿಕರು ಅಸ್ವಸ್ಥರಾದ ಘಟನೆ ಆಂಧ್ರಪ್ರದೇಶದ ಅನಕಾಪಲ್ಲಿ ಜಿಲ್ಲೆಯ ಅಚ್ಯುತಪುರಂನಲ್ಲಿ ನಡೆದಿದೆ.
ಅಚ್ಯುತಪುರಂನಲ್ಲಿರುವ ವಿಶೇಷ ಆರ್ಥಿಕ ವಲಯದಿಂದ ಮಂಗಳವಾರ ರಾತ್ರಿ 8.30ರ ಸುಮಾರಿಗೆ ಅನಿಲ ಸೋರಿಕೆಯಾಗಿದ್ದು, ಹತ್ತಿರದ ಪಶು ವೈದ್ಯಕೀಯ ಔಷಧ ಪ್ರಯೋಗಾಲಯದಿಂದ ಅನಿಲ ಸೋರಿಕೆ ಆಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಸೋರಿಕೆಗೆ ನಿಖರ ಮೂಲ ಯಾವುದು ಎಂಬುದು ತಿಳಿದು ಬಂದಿಲ್ಲ.
ಈ ಸಂದರ್ಭದಲ್ಲಿ 400ಕ್ಕೂ ಹೆಚ್ಚು ಕಾರ್ಮಿಕರು ಶಿಫ್ಟ್ ಕೆಲಸದಲ್ಲಿದ್ದರು. ಅನಿಲ ಸೋರಿಕೆಯಿಂದಾಗಿ ಕೆಲವರಿಗೆ ವಾಕರಿಕೆ, ವಾಂತಿಯಾಗಿದ್ದು, ಕೆಲವು ಕಾರ್ಮಿಕರು ಮೂರ್ಛೆ ತಪ್ಪಿ ಬಿದ್ದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಸ್ವಸ್ಥಗೊಂಡವರಿಗೆ ಕಾರ್ಖಾನೆಯಲ್ಲೇ ಚಿಕಿತ್ಸೆ ನೀಡಲಾಗಿದೆ. ಆದರೆ 50ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರನ್ನು ಬಸ್ ಮತ್ತು ಕಾರುಗಳಲ್ಲಿ ಅನಕಾಪಲ್ಲಿಯ ಎನ್ಟಿಆರ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಆಂಧ್ರ ಪ್ರದೇಶದಲ್ಲಿ ಅನಿಲ ಸೋರಿಕೆ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ. ಏಪ್ರಿಲ್ 13ರಂದು ಪ್ರಯೋಗಾಲಯದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಏಳು ಮಂದಿ ಸಾವನ್ನಪ್ಪಿ, 15 ಮಂದಿ ಗಾಯಗೊಂಡಿದ್ದರು. ಜೂನ್ 3ರಂದು ವಿಶಾಖಪಟ್ಟಣದಲ್ಲಿ ಅನಿಲ ಸೋರಿಕೆಯಿಂದ 170ಕ್ಕೂ ಹೆಚ್ಚು ಕಾರ್ಮಿಕರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.