ಮಡಿಕೇರಿ, ಆ 03 (DaijiworldNews/DB): ಭಾರೀ ಮಳೆಯಿಂದಾಗಿ ದೇವರಕೊಲ್ಲಿ ಕೊಯನಾಡು ರಸ್ತೆಯಲ್ಲಿ ಬೃಹತ್ ಗಾತ್ರದ ಬಿರುಕುಗಳು ಕಾಣಿಸಿಕೊಂಡ ಪರಿಣಾಮ ಭಾರೀ ವಾಹನ ಸಂಚಾರ ನಿಷೇಧಿಸಲಾಗಿದೆ. ಮಳೆ ಮುಂದುವರಿದಲ್ಲಿ ಮಡಿಕೇರಿ-ಮಂಗಳೂರು ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
ಈಗಾಗಲೇ ಕಲ್ಲುಗುಂಡಿ, ಸಂಪಾಜೆ, ಕೊಯನಾಡು ಭಾಗಗಳಲ್ಲಿ ಧಾರಾಕಾರ ಮಳೆಯಿಂದಾಗಿ ಪಯಸ್ವಿನಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡಿದ್ದು, ಕೊಯನಾಡಿನ ಡಿಪೋ ಸಮೀಪ ರಸ್ತೆಯಲ್ಲಿ ಭಾರೀ ಬಿರುಕು ಕಾಣಿಸಿಕೊಂಡಿದೆ. ಇದಲ್ಲದೆ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡ ಪರಿಣಾಮ ಈಗಾಗಲೇ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಇನ್ನು ಕೊಯನಾಡು ಸೇತುವೆ ಬಳಿಯೂ ರಸ್ತೆ ಕುಸಿದಿದೆ. ಸದ್ಯ ರಸ್ತೆ ಬಿರುಕು ಬಿಟ್ಟ ಮತ್ತು ಕುಸಿತಕ್ಕೊಳಗಾದ ಜಾಗಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಆತಂಕದಿಂದಲೇ ವಾಹನ ಚಾಲಕರು ವಾಹನ ಸಂಚಾರ ಮಾಡಬೇಕಾಗಿ ಬಂದಿದೆ.
ಬಿರುಕು ಕಾಣಿಸಿಕೊಂಡ ಸ್ಥಳಕ್ಕೆ ತಹಶೀಲ್ದಾರ್ ಮಹೇಶ್, ಕಂದಾಯ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜೀವ ಕೈಯಲ್ಲಿ ಹಿಡಿದು ರಾತ್ರಿ ಕಳೆದರು
ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನದಿ ನೀರಿನ ಮಟ್ಟ ಏರಿಕೆಯಾಗಿ ಆಸುಪಾಸಿನ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಇಲ್ಲಿನ ನಿವಾಸಿಗಳು ರಾತ್ರೋ ರಾತ್ರಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡರು. ಆದರೆ ಮನೆಗಳಲ್ಲೇ ಉಳಿದವರು ಜೀವ ಕೈಯಲ್ಲಿ ಹಿಡಿದುಕೊಂಡೇ ರಾತ್ರಿ ಕಳೆಯಬೇಕಾಯಿತು. ಕೊಯನಾಡಿನ ಹಲವು ಕುಟುಂಬಗಳನ್ನು ಈಗಾಗಲೇ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.