ಬೆಂಗಳೂರು, ಆ 03 (DaijiworldNews/MS): ತಿಗಣೆ, ಜಿರಳೆ ನಾಶಪಡಿಸಲು ಮನೆಯಲ್ಲಿ ಸಿಂಪಡಿಸಿದ್ದ ಔಷಧದಿಂದಾಗಿ ಆರು ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ವಸಂತನಗರದ ಮಾರಮ್ಮ ದೇವಸ್ಥಾನದ ಬಳಿ ಮನೆಯೊಂದರಲ್ಲಿ ತಡರಾತ್ರಿ ನಡೆದಿದೆ.
ಮೃತ ಬಾಲಕಿಯನ್ನು ಅಹನಾ (6) ಎಂದು ಗುರುತಿಸಲಾಗಿದೆ. ಬಾಲಕಿಯ ತಂದೆ ವಿನೋದ್ ನಾಯರ್ ಹಾಗೂ ತಾಯಿಯೂ ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೂಲತಃ ಕೇರಳದವರಾಗಿರುವ ವಿನೋದ್ ನಾಯರ್ ಕುಟುಂಬ ಸುಮಾರು 8 ವರ್ಷದಿಂದ ಬೆಂಗಳೂರಿನಲ್ಲಿ ನೆಲೆಸಿತ್ತು.ವಿನೋದ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು , ಬಾಲಕಿ ಅಹನಾ ವಸಂತನಗರದ ಶಾಲೆಯಲ್ಲಿ ಓದುತ್ತಿದ್ದಳು.
ಇಲ್ಲಿನ ಕಟ್ಟಡದ 4 ಮನೆಗಳಲ್ಲಿ ಜಿರಳೆ ಕಾಟವೆಂದು ಮಾಲೀಕ ಶಿವಶಂಕರ್ ಔಷಧ ಸಿಂಪಡಿಸಿ, ಒಂದು ವಾರ ಮನೆಗಳನ್ನ ಖಾಲಿ ಬಿಡುವಂತೆ ನಿವಾಸಿಗಳಿಗೆ ಸೂಚಿಸಿದ್ದರು. ಅದರಂತೆ ತಾತ್ಕಾಲಿಕವಾಗಿ ಮನೆ ಖಾಲಿ ಮಾಡಿದ್ದ ಬಾಲಕಿಯ ಪೋಷಕರು, ಬಳಿಕ ಮಾಲೀಕನಿಗೆ ಹೇಳದೇ ನಾಲ್ಕೇ ದಿನದಲ್ಲಿ ಮನೆಗೆ ಮರಳಿದ್ದರು ಎಂದು ಮಾಲೀಕ ಶಿವಶಂಕರ್ ದೂರಿದ್ದಾರೆ.
ಆದರೆ ನಮಗೆ ಇದ್ಯಾವುದರ ಅರಿವೇ ಇರಲಿಲ್ಲ, ಮನೆ ಮಾಲೀಕ ಔಷಧ ಸಿಂಪಡಿಸಿರುವ ಬಗ್ಗೆ ಯಾವ ಮಾಹಿತಿಯನ್ನು ನೀಡಿರಲಿಲ್ಲ. ಊರಿನಿಂದ ಬಂದ ನಾವು ಮಲಗಿದ್ದು , ಈ ವೇಳೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಬಾಲಕಿಯ ಪೋಷಕರು ದೂರಿದ್ದಾರೆ.
ಬಾಲಕಿ ಪರಿಸ್ಥಿತಿ ಗಂಭೀರವಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಬಾಲಕಿ ಬದುಕುಳಿದಿಲ್ಲ. ಬೌರಿಂಗ್ ಆಸ್ಪತ್ರೆಯಲ್ಲಿ ಬಾಲಕಿಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಸದ್ಯ ಪೋಷಕರಿಂದ ಹೇಳಿಕೆ ಪಡೆದಿರುವ ಹೈಗ್ರೌಂಡ್ಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮನೆ ಮಾಲೀಕ ಶಿವಶಂಕರ್ನನ್ನ ವಶಕ್ಕೆ ಪಡೆದಿದ್ದಾರೆ.