ಬೆಂಗಳೂರು, ಆ 02 (DaijiworldNews/SM): ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಹಲವು ಕಡೆಗಳಲ್ಲಿ ಅನಾಹುತವುಂಟಾಗಿದ್ದು, ಕೆಲವು ಮನೆಗಳು ಕುಸಿತಗೊಂಡಿರುವ ಘಟನೆ ನಡೆದಿದ್ದು, ಮನೆ ಕಳೆದುಕೊಂಡವರಿಗೆ ತಕ್ಷಣ ಪರಿಹಾರ ಬಿಡುಗಡೆಗೊಳಿಸಿ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೂಚಿಸಿದ್ದಾರೆ.
ತೀವ್ರ ಮಳೆಯಿಂದ ಹಾನಿಗೊಳಗಾಗಿರುವ ಹನ್ನೊಂದು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮಂಗಳವಾರ ವೀಡಿಯೋ ಸಂವಾದ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮನೆ ಹಾನಿಗೆ ತಕ್ಷಣ ಪರಿಹಾರ ನೀಡುವಂತೆ ಸೂಚಿಸಿದರು.
ಜೂನ್ ಒಂದರಿಂದ ಈವರೆಗೆ ಆಗಿರುವ ಭಾರಿ ಮಳೆ ಹಾಗೂ ಪ್ರವಾಹದಿಂದ ರಾಜ್ಯದಲ್ಲಿ ಉಂಟಾಗಿರುವ ಹಾನಿಯ ಬಗ್ಗೆ ಅಧಿಕಾರಿಗಳಿಂದ ಸಿಎಂ ಬೊಮ್ಮಾಯಿ ಮಾಹಿತಿ ಪಡೆದರು.
ಮಳೆಯಿಂದ ಭಾರೀ ಹಾನಿ
ಒಟ್ಟು 3499 ಹೆಕ್ಟೇರ್ ಕೃಷಿ ಬೆಳೆ ನಾಶವಾಗಿದ್ದು, 2057 ಹೆಕ್ಟೇರ್ ತೋಟಗಾರಿಕಾ ಬೆಳೆ ನಾಶವಾಗಿದೆ. 2430 ಮನೆಗಳು ಸಂಪೂರ್ಣ ಹಾನಿಗೊಳಗಾಗಿವೆ. 4378 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಇದುವರೆಗೆ ಭಾರೀ ಮಳೆಗೆ 39 ಮಂದಿ ಸಾವನ್ನಪ್ಪಿದ್ದು, 99 ಪ್ರಾಣಿಗಳ ಜೀವಕ್ಕೂ ಹಾನಿಯಾಗಿದೆ. 1730 ಕಿ.ಮೀ ರಸ್ತೆ ಹಾನಿಯಾಗಿದ್ದು, 5419 ಕಿ.ಮೀ. ಗ್ರಾಮೀಣ ರಸ್ತೆ ಹಾನಿಯಾಗಿವೆ. 629 ಸೇತುವೆಗಳು ಹಾನಿಯಾಗಿವೆ. 3264 ಶಾಲಾ ಕಟ್ಟಡಗಳು ಹಾನಿಯಾಗಿದ್ದು, 29 ಪ್ರಾಥಮಿಕ ಆರೋಗ್ಯ ಕಟ್ಟಡಗಳಿಗೆ ಹಾನಿಯಾಗಿದೆ. 11796 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ ಹಾಗೂ 759 ಟ್ರಾನ್ಸ್ ಫಾರ್ಮರ್ಗಳು ಹಾನಿಗೊಳಪಟ್ಟಿವೆ.