ಭಟ್ಕಳ, ಆ 02 (DaijiworldNews/SM): ಉತ್ತರ ಕನ್ನಡದಲ್ಲಿ ಎಡಬಿಡದೆ ಸುರಿದ ಮಳೆಯಿಂದಾಗಿ ಮುಟ್ಟಳ್ಳಿಯ ಮನೆಯೊಂದರ ಮೇಲೆ ಗುಡ್ಡ ಕುಸಿದಿದ್ದು ಅವಶೇಷಗಳಡಿಯಲ್ಲಿ ನಾಲ್ವರು ಸಿಲುಕಿಕೊಂಡಿದ್ದರು. ಇದೀಗ ನಾಲ್ವರ ಮೃತದೇಹಗಳನ್ನು ಎನ್ ಡಿಆರ್ ಎಫ್ ಸಿಬ್ಬಂದಿಗಳು ನಿರಂತರ ಕಾರ್ಯಾಚರಣೆಯ ಬಳಿಕ ಹೊರ ತೆಗೆದಿದ್ದಾರೆ.
ಅವಶೇಷಗಳ ಅಡಿ ಸಿಲುಕಿ ಮೃತಪಟ್ಟವರನ್ನು ಲಕ್ಷ್ಮೀ ನಾರಾಯಣ ನಾಯ್ಕ್, ಅನಂತ ನಾಯ್ಕ್, ಪ್ರವೀಣ ನಾಯ್ಕ್ ಹಾಗೂ ಲಕ್ಷ್ಮೀ ನಾಯ್ಕ್ ಎಂದು ಗುರುತಿಸಲಾಗಿದೆ. ಮನೆ ಮೇಲೆ ದಿಢೀರ್ ಗುಡ್ಡ ಕುಸಿದಿದ್ದರಿಂದ ಮನೆಯಲ್ಲಿದ್ದವರು ಹೊರಗೆ ಬರಲು ಸಾಧ್ಯವಾಗಿರಲಿಲ್ಲ.
ಈ ಸುದ್ದಿ ತಿಳಿದ ಕೂಡಲೇ ಜಿಲ್ಲಾಡಳಿತ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿತ್ತು. ಆದರೆ ಅವರ ಜೀವ ಉಳಿಸಲು ಸಾಧ್ಯವಾಗಿರಲಿಲ್ಲ. ಇನ್ನು ಸ್ಥಳೀಯರು ಹಾಗೂ ಎನ್ ಡಿ ಆರ್ ಎಫ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಶವಗಳನ್ನು ಹೊರತೆಗೆದಿದ್ದಾರೆ.
ಭಟ್ಕಳದಲ್ಲಿ ಭಾರೀ ಮಳೆಯಿಂದಾಗಿ ಎಲ್ಲಾ ಕಡೆ ನೀರು ತುಂಬಿ ಭಾರೀ ಅನಾಹುತ ಸಂಭವಿಸಿದೆ. ಶಿರಾಲಿ ಭಾಗದಲ್ಲಿ ಅನೇಕ ಮನೆಗಳಲ್ಲಿ ಸಿಕ್ಕಿ ಹಾಕಿಕೊಂಡಿರುವವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.